ಕರ್ನಾಟಕ : Tulu Times l ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 5, 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ ರಾಜ್ಯಮಟ್ಟದ ಪರೀಕ್ಷೆ ನಡೆಸುವ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈ ಬಾರಿ ಇದನ್ನು ‘ಬೋರ್ಡ್ ಪರೀಕ್ಷೆ’ ಎಂದು ಅಲ್ಲ, ‘ಮೌಲ್ಯಮಾಪನ ಪರೀಕ್ಷೆ’ ಎಂಬ ಹೆಸರಿನಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಎರಡು ವರ್ಷಗಳ ಹಿಂದೆ ಇದೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಕೈಗೊಂಡಿದ್ದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಆ ಹಿನ್ನೆಲೆಯಲ್ಲೇ ಕಾನೂನು ತೊಡಕುಗಳನ್ನು ತಪ್ಪಿಸಿ ಹೊಸ ಮಾದರಿಯಲ್ಲಿ ಪರೀಕ್ಷೆ ಜಾರಿಗೊಳಿಸುವ ಕುರಿತು ಇಲಾಖಾ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ಹಲವು ಅಧ್ಯಯನಗಳು, ಮೇಲಿನ ತರಗತಿಯಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳು ಕೆಳತರಗತಿಗಳ ಮೂಲಭೂತ ಕಲಿಕಾ ಕೌಶಲಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಿಲ್ಲ ಎಂಬುದನ್ನು ಸೂಚಿಸಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಪರಿಶೀಲಿಸಿ, ಅವರು ಯಾವ ವಿಷಯಗಳಲ್ಲಿ ಹಿಂದುಳಿದಿದ್ದಾರೆ ಎಂಬುದನ್ನು ಗುರುತಿಸುವ ಉದ್ದೇಶದಿಂದ ಮೌಲ್ಯಮಾಪನ ಪರೀಕ್ಷೆ ನಡೆಸಲು ಸರ್ಕಾರ ಯೋಜಿಸುತ್ತಿದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಉದ್ದೇಶವಿಲ್ಲ. ಬದಲಾಗಿ, ಅವರ ಕಲಿಕಾ ಸಾಮರ್ಥ್ಯವನ್ನು ಅಳೆಯುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದೇ ಮುಖ್ಯ ಗುರಿಯಾಗಿದೆ.
ಪ್ರಸ್ತಾವಿತ ಯೋಜನೆಯ ಪ್ರಕಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಶಾಲೆಗಳಿಗೆ ಕಳುಹಿಸಲಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತಾಲೂಕು ಮಟ್ಟದಲ್ಲಿ ನಡೆಸುವ ಸಾಧ್ಯತೆ ಇದೆ. ಈ ಪರೀಕ್ಷೆಯ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟ, ಯಾವ ವಿಷಯದಲ್ಲಿ ಹೆಚ್ಚಿನ ನೆರವು ಬೇಕು ಹಾಗೂ ಬೋಧನಾ ವಿಧಾನದಲ್ಲಿ ಯಾವ ರೀತಿಯ ಸುಧಾರಣೆ ಅಗತ್ಯ ಎಂಬುದನ್ನು ಗುರುತಿಸಲು ಶಿಕ್ಷಣ ಇಲಾಖೆ ಉದ್ದೇಶಿಸಿದೆ.
2024ರಲ್ಲಿ ರಾಜ್ಯ ಸರ್ಕಾರ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಆದರೆ ಖಾಸಗಿ ಶಾಲೆಗಳು ಮತ್ತು ಪೋಷಕರು ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅನುಮತಿ ನೀಡಿರಲಿಲ್ಲ. ಆದ್ದರಿಂದ ಈ ಬಾರಿ ‘ಬೋರ್ಡ್ ಪರೀಕ್ಷೆ’ ಬದಲಾಗಿ ‘ಮೌಲ್ಯಮಾಪನ ಪರೀಕ್ಷೆ’ ಎಂಬ ಹೊಸ ಚೌಕಟ್ಟಿನಡಿ ಪರೀಕ್ಷೆಗಳನ್ನು ಜಾರಿಗೆ ತರಲು ಸರ್ಕಾರ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎನ್ನಲಾಗಿದೆ. ಸದ್ಯ ಈ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಿಲ್ಲ. ಸರ್ಕಾರದ ಅಧಿಕೃತ ಘೋಷಣೆಯ ಬಳಿಕವೇ ಪರೀಕ್ಷೆಯ ಸ್ವರೂಪ, ವೇಳಾಪಟ್ಟಿ ಹಾಗೂ ಜಾರಿಗೆ ಸಂಬಂಧಿಸಿದ ವಿವರಗಳು ಸ್ಪಷ್ಟವಾಗಲಿವೆ.
Assessment exam instead of board exam: Education Department – ತುಳುಟೈಮ್ಸ್
ಇದನ್ನೂ ಓದಿ :ಚಿಲ್ಲರೆ ಇಲ್ಲ ಎಂದರೆ ಬಸ್‌ನಿಂದ ಇಳಿಸುವಂತಿಲ್ಲ : ಹೊಸ ನಿಯಮ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MS_WjTs_Vqo











