ಬದ್ರಿನಾಥ : Tulu Times l ಅಯೋಧ್ಯೆಯ ರಾಮಮಂದಿರದ ಕಾಣಿಕೆ ದುರ್ಬಳಕೆ ಆರೋಪದ ಬೆನ್ನಲ್ಲೇ, ಇದೀಗ ಬದ್ರಿನಾಥ ದೇವಸ್ಥಾನದಲ್ಲೂ ಕಾಣಿಕೆ ಹಣದ ದುರ್ಬಳಕೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ತನಿಖೆಗೆ ಆದೇಶಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು, ಪ್ರಕರಣದ ಸಮಗ್ರ ತನಿಖೆಗೆ ಆಂತರಿಕ ತನಿಖಾ ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಸಂಬಂಧಪಟ್ಟ ಸಿಬ್ಬಂದಿಯಿಂದಲೂ ವಿವರಣೆ ಕೇಳಲಾಗಿದೆ.
ಶುಕ್ರವಾರ ಭೈರವ ಸೇನಾ ಎಂಬ ಸಂಘಟನೆ ಬದ್ರಿನಾಥ ಧಾಮದಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂದು ಆರೋಪಿಸಿ, ದೇವಸ್ಥಾನ ಸಮಿತಿಯ ಅಧ್ಯಕ್ಷರ ವೈಯಕ್ತಿಕ ಸಹಾಯಕನ ವಿರುದ್ಧವೂ ತನಿಖೆ ನಡೆಸುವಂತೆ ಆಗ್ರಹಿಸಿತ್ತು. ಆದರೆ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವೈಯಕ್ತಿಕ ಕಾರ್ಯದರ್ಶಿ ಎಂದು ಉಲ್ಲೇಖಿಸಿರುವ ವ್ಯಕ್ತಿ ತಮ್ಮ ವೈಯಕ್ತಿಕ ಕಾರ್ಯದರ್ಶಿಯಲ್ಲ, ಬದಲಿಗೆ ದೇವಸ್ಥಾನ ಸಮಿತಿಯ ನಿಯಮಿತ ಸರ್ಕಾರಿ ನೌಕರನಾಗಿದ್ದು, ಈ ಹಿಂದೆ ಮೂವರು ಮಾಜಿ ಅಧ್ಯಕ್ಷರ ವೈಯಕ್ತಿಕ ಸಹಾಯಕರಾಗಿ ಕೆಲಸ ಮಾಡಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

ತನಿಖೆಯಲ್ಲಿ ಯಾವುದೇ ಸಿಬ್ಬಂದಿ ತಪ್ಪಿತಸ್ಥರೆಂದು ಸಾಬೀತಾದರೆ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, ದೇವಸ್ಥಾನ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗಡ್ ತಿಳಿಸಿದ್ದಾರೆ. ಲಭ್ಯವಿರುವ ದೃಶ್ಯಗಳು ಸ್ಪಷ್ಟವಾಗಿಲ್ಲವಾದರೂ, ವಿಷಯದ ಗಂಭೀರತೆಯನ್ನು ಗಮನಿಸಿ ಅಧ್ಯಕ್ಷರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಅಧ್ಯಕ್ಷರ ಸೂಚನೆಯಂತೆ ಸಂಬಂಧಪಟ್ಟ ಸಿಬ್ಬಂದಿಯಿಂದ ವಿವರಣೆ ಪಡೆಯಲಾಗುತ್ತಿದ್ದು, ತನಿಖಾ ಸಮಿತಿ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಮಿತಿ ರಚನೆಯಾದ ಬಳಿಕ ಲಭ್ಯವಿರುವ ಸಾಕ್ಷ್ಯಗಳು, ದಾಖಲೆಗಳು ಮತ್ತು ಸಂಬಂಧಪಟ್ಟವರ ಹೇಳಿಕೆಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲಿದೆ.
ತನಿಖೆಯಲ್ಲಿ ಅಕ್ರಮ ಅಥವಾ ಹಣಕಾಸು ದುರ್ಬಳಕೆ ದೃಢಪಟ್ಟರೆ, ಶ್ರೀ ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ಕಾಯ್ದೆ, 1939 ಹಾಗೂ ಸಿಬ್ಬಂದಿ ನಡವಳಿಕೆ ನಿಯಮಗಳ ಪ್ರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ. ಈ ಪ್ರಕರಣವು ಕೋಟ್ಯಂತರ ಭಕ್ತರ ಭಾವನೆಗಳಿಗೆ ಸಂಬಂಧಿಸಿರುವುದರಿಂದ, ದೃಢೀಕರಣವಿಲ್ಲದ ಆರೋಪಗಳನ್ನು ಹರಡಬಾರದು ಎಂದು ದೇವಸ್ಥಾನ ಸಮಿತಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
Allegation of social media; Investigation in Badrinath temple also – ತುಳು ಟೈಮ್ಸ್
ಇದನ್ನೂ ಓದಿ : ಬ್ರೈನ್ ಟ್ಯೂಮರ್‌ಗೆ ಬಲಿಯಾದ ‘ಪ್ಯಾಟೆ ಮಂದಿ ಕಾಡಿಗೆ ಬಂದರು’ ಖ್ಯಾತಿಯ ಪದ್ದುಗೌಡ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/DXYldsCViiw?feature=share











