ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದುಬಾರೆ ದುರಂತದ ಬಳಿಕ ಕ್ರಮ: ಕರ್ನಾಟಕದಲ್ಲಿ ಓಪನ್ ಜೀಪ್ ಸಫಾರಿಗೆ ಬ್ರೇಕ್?

ಕರ್ನಾಟಕ : Tulu Times l ಕರ್ನಾಟಕದ ಅರಣ್ಯ ಪ್ರವಾಸೋದ್ಯಮದಲ್ಲಿ ಮಹತ್ವದ ಬದಲಾವಣೆಗೆ ಸರ್ಕಾರ ಸಜ್ಜಾಗಿದ್ದು, ವನ್ಯಜೀವಿ ಪ್ರದೇಶಗಳಲ್ಲಿ ಬಳಸಲಾಗುತ್ತಿರುವ ಓಪನ್ ಜೀಪ್ ಸಫಾರಿಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಿ, ಸುರಕ್ಷಿತ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ.

ಇತ್ತೀಚೆಗೆ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರವಾಸಿಗರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವಂತೆ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬರೆದಿರುವ ಸೂಚನಾ ಪತ್ರದಲ್ಲಿ, ಈಗ ಬಳಸಲಾಗುತ್ತಿರುವ ಪರಿವರ್ತಿತ ಓಪನ್ ಕ್ಯಾಂಪರ್ ಜೀಪ್‌ಗಳ ಬದಲು ರಕ್ಷಣಾತ್ಮಕ ತಡೆಗೋಡೆಗಳಿರುವ ಸುರಕ್ಷಿತ ಬಸ್‌ಗಳನ್ನು ಬಳಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

ಸಫಾರಿ ವಾಹನಗಳಿಗೆ ಸಂಬಂಧಿಸಿದ ಯಾವುದೇ ಗಂಭೀರ ಅಪಘಾತ ಸಂಭವಿಸುವುದಕ್ಕೂ ಮುನ್ನ ಮುನ್ನೆಚ್ಚರಿಕಾ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ. ಈ ಹೊಸ ಸುರಕ್ಷತಾ ಮಾರ್ಗಸೂಚಿಗಳು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಜಾರಿಯಾಗಲಿವೆ.

ಕರ್ನಾಟಕದ ವನ್ಯಜೀವಿ ಸಫಾರಿಗಳಿಗೆ ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸುರಕ್ಷಿತ ಬಸ್‌ಗಳು ಮತ್ತು ರಕ್ಷಿತ ವಾಹನಗಳಿಗೆ ಮಾತ್ರ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ. ಇದಲ್ಲದೆ, ಈಗಿರುವ ಸಫಾರಿ ವಾಹನಗಳಲ್ಲಿ ಕಬ್ಬಿಣದ ಜಾಲರಿ ಅಥವಾ ಶ್ಯಾಟರ್‌ಪ್ರೂಫ್ ಗಾಜು ಅಳವಡಿಸಿ ಸುರಕ್ಷತೆ ಹೆಚ್ಚಿಸುವಂತೆ ಸೂಚಿಸಲಾಗಿದೆ. ವಿಐಪಿ ಅತಿಥಿಗಳೂ ಸಹ ಸುರಕ್ಷಿತ ವಾಹನಗಳಲ್ಲೇ ಅರಣ್ಯ ಪ್ರವೇಶಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಹೊಸ ಸುರಕ್ಷತಾ ಕ್ರಮಗಳ ಭಾಗವಾಗಿ ಎಲ್ಲ ಸಫಾರಿ ವಾಹನಗಳಲ್ಲೂ ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಕಿಟ್‌ಗಳನ್ನು ಕಡ್ಡಾಯಗೊಳಿಸಲಾಗುತ್ತದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಫಾರಿ ಕೇಂದ್ರಗಳ ಬಳಿ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಈ ಕ್ರಮಗಳನ್ನು ಜಾರಿಗೆ ತರಲು ಅರಣ್ಯ ಇಲಾಖೆ ಈಗ ಅಧ್ಯಯನ ಆರಂಭಿಸಿದ್ದು, ರಾಜ್ಯದ ವನ್ಯಜೀವಿ ಪ್ರವಾಸೋದ್ಯಮ ಜಾಲದಲ್ಲಿ ಹೊಸ ಸುರಕ್ಷತಾ ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದೆ.

Action after Dubare tragedy: A break for open jeep safaris in Karnataka? – ತುಳುಟೈಮ್ಸ್

ಇದನ್ನೂ ಓದಿ :ಮೇ 26ರ ಸುಮಾರಿಗೆ ಕೇರಳಕ್ಕೆ ಮುಂಗಾರು ಪ್ರವೇಶ: ಐಎಂಡಿ ಮುನ್ಸೂಚನೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=q5DDTW_PsT0pxQk7

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page