ಮಂಗಳೂರು : Tulu Times l ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜುಲೈ 18, 2026 (ಶನಿವಾರ) ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳು (12ನೇ ತರಗತಿಯವರೆಗೆ) ರಜೆ ಘೋಷಿಸಿದೆ. ಯಾವುದೇ ತರಗತಿಗಳನ್ನು ನಡೆಸದಂತೆ ಜಿಲ್ಲಾಡಳಿತ ಆದೇಶಿಸಿದೆ.
ಆದೇಶವನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ–2005ರ ಕಲಂ 51(ಬಿ) ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಜಿಲ್ಲಾಡಳಿತವು ಸಾರ್ವಜನಿಕರಿಗೆ ಹಲವು ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿದ್ದು, ಮಕ್ಕಳು ತಗ್ಗು ಪ್ರದೇಶಗಳು, ಕೆರೆ, ನದಿ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಪಾಲಕರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಮತ್ತು ಸಮುದ್ರ ತೀರಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಉಳಿದು ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿರಬೇಕು. ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಿ, ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಲಾಗಿದೆ.

ಜೊತೆಗೆ, ಸಂಬಂಧಿಸಿದ ಇಲಾಖೆಗಳು ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ನಿರ್ದೇಶಿಸಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ತುರ್ತು ನೆರವು ಅಥವಾ ಮಾಹಿತಿಗಾಗಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 1077 ಅಥವಾ 0824-2442590 ಅನ್ನು ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
Orange alert in Dakshina Kannada: Holiday for schools and colleges on July 18. – ತುಳುಟೈಮ್ಸ್
ಇದನ್ನೂ ಓದಿ :ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಅಂದವಾದ ಬರೆವಣಿಗೆ ಕಾರ್ಯಗಾರಕ್ಕೆ ಉತ್ತಮ ಸ್ಪಂದನೆ
==
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/YOPIvEQ3tCQ?feature=share











