ಬ್ರೇಕಿಂಗ್ ನ್ಯೂಸ್
ಕರ್ನಾಟಕ

1,000ಕ್ಕೂ ಹೆಚ್ಚು ಸಂಚಿಕೆಗಳ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಈ ವಾರ ಮುಕ್ತಾಯ

ಬೆಂಗಳೂರು: Tulu Times l ಕನ್ನಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಜನಪ್ರಿಯ ಕುಟುಂಬ ಕಥಾಹಂದರದ ಧಾರಾವಾಹಿ ಭಾಗ್ಯಲಕ್ಷ್ಮಿ ತನ್ನ ಸುದೀರ್ಘ ಪಯಣಕ್ಕೆ ವಿದಾಯ ಹೇಳಲು ಸಜ್ಜಾಗಿದೆ. ಮೂರುವರೆ ವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರಗೊಂಡ ಈ ಧಾರಾವಾಹಿ 1,000ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರ್ಣಗೊಳಿಸಿ ಇದೀಗ ಅಂತಿಮ ಹಂತ ತಲುಪಿದೆ. ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿದ್ದ ‘ಭಾಗ್ಯಲಕ್ಷ್ಮಿ’ ಈ ವಾರ ಪ್ರಸಾರವಾಗಲಿರುವ ಕೊನೆಯ ಸಂಚಿಕೆಗಳೊಂದಿಗೆ ಮುಕ್ತಾಯಗೊಳ್ಳಲಿದೆ. ವಾಹಿನಿಯು ಈಗಾಗಲೇ ಅಂತಿಮ ಸಂಚಿಕೆಗಳ ಪ್ರೋಮೋಗಳನ್ನು ಪ್ರಸಾರ ಮಾಡಿದ್ದು, ಅಭಿಮಾನಿಗಳಲ್ಲಿ ಭಾವನಾತ್ಮಕ ವಾತಾವರಣ ಮೂಡಿಸಿದೆ.

ಧಾರಾವಾಹಿಯ ಕಥೆಯಲ್ಲಿ ಅನೇಕ ಸಂಕಷ್ಟಗಳು, ಅವಮಾನಗಳು ಮತ್ತು ಸವಾಲುಗಳನ್ನು ಎದುರಿಸಿದ್ದ ಭಾಗ್ಯ ಪಾತ್ರಕ್ಕೆ ಕೊನೆಗೂ ನೆಮ್ಮದಿ ಮತ್ತು ಸಂತೋಷದ ಬದುಕು ದೊರೆಯಲಿದೆ. ಅಂತಿಮ ಸಂಚಿಕೆಗಳಲ್ಲಿ ಭಾಗ್ಯ ತನ್ನ ಪತಿಯ ಕುಟುಂಬದ ಮೆಚ್ಚುಗೆ ಗಳಿಸುವುದರ ಜೊತೆಗೆ ದಾರಿ ತಪ್ಪಿದ ಕನ್ನಿಕಾ ಜೀವನವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಲಿದ್ದಾಳೆ. ಮನರಂಜನೆಗೆ ಮಾತ್ರ ಸೀಮಿತವಾಗದೆ, ‘ಭಾಗ್ಯಲಕ್ಷ್ಮಿ’ ಅನೇಕ ಗೃಹಿಣಿಯರಿಗೆ ಆತ್ಮವಿಶ್ವಾಸ, ಧೈರ್ಯ ಮತ್ತು ಹೋರಾಟದ ಸ್ಪೂರ್ತಿಯನ್ನು ನೀಡಿದ ಧಾರಾವಾಹಿಯಾಗಿ ಗುರುತಿಸಿಕೊಂಡಿದೆ. ಕುಟುಂಬದ ಜವಾಬ್ದಾರಿಗಳ ನಡುವೆಯೂ ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಬಹುದು ಎಂಬ ಸಂದೇಶವನ್ನು ಇದು ನೀಡಿತ್ತು.

ಧಾರಾವಾಹಿಯಲ್ಲಿ ಭಾಗ್ಯ ಪಾತ್ರವನ್ನು ನಿರ್ವಹಿಸಿದ ಸುಷ್ಮಾ ಕೆ. ರಾವ್ ಅಪಾರ ಜನಪ್ರಿಯತೆ ಗಳಿಸಿದ್ದರು. ಕರ್ನಾಟಕದ ಅನೇಕ ಮಹಿಳೆಯರು ಅವರನ್ನು ತಮ್ಮ ಮನೆಯ ಸದಸ್ಯೆಯಂತೆ ಸ್ವೀಕರಿಸಿ ಪ್ರೀತಿ ಮತ್ತು ಬೆಂಬಲ ನೀಡಿದ್ದಾರೆ. ಮೂಲಗಳ ಪ್ರಕಾರ, ‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಅಂತಿಮ ಸಂಚಿಕೆ ಜೂನ್ 7ರಂದು ಪ್ರಸಾರವಾಗುವ ಸಾಧ್ಯತೆಯಿದೆ. ಇದೇ ವೇಳೆ, ನಟಿ ಸುಷ್ಮಾ ಕೆ. ರಾವ್ ಮುಂದಿನ ದಿನಗಳಲ್ಲಿ ಹೊಸ ರಿಯಾಲಿಟಿ ಶೋ ಆಗಿರುವ ಕ್ವಾಟ್ಲೆ ಕಿಚನ್ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಸ್ಥಾನದಲ್ಲಿ ಜನಪ್ರಿಯ ಕನ್ನಡ ಧಾರಾವಾಹಿ ಅಗ್ನಿಸಾಕ್ಷಿ ಮರುಪ್ರಸಾರವಾಗಲಿದ್ದು, ಜೂನ್ 8ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಮೂರುವರೆ ವರ್ಷಗಳ ಕಾಲ ಪ್ರೇಕ್ಷಕರ ಮನರಂಜಿಸಿದ್ದ ‘ಭಾಗ್ಯಲಕ್ಷ್ಮಿ’ ಅಂತ್ಯಗೊಳ್ಳುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದ್ದರೂ, ಭಾಗ್ಯ ಪಾತ್ರದ ಸುಖಾಂತ್ಯದೊಂದಿಗೆ ಧಾರಾವಾಹಿ ನೆನಪುಗಳ ಪುಟ ಸೇರಲಿದೆ.

‘Bhagyalakshmi’, a serial with over 1,000 episodes, ends this week – ತುಳು ಟೈಮ್ಸ್

ಇದನ್ನೂ ಓದಿ : ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಇತಿಹಾಸ ಸೃಷ್ಟಿ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/YZbFFQ3xewU?si=C86R37A1a09Ro8_S

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 179

You cannot copy content of this page