ಮಂಗಳೂರು: Tulu Times l ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದ ನಾಲ್ಕು ತಾಲೂಕುಗಳಲ್ಲಿ ಆಗಸ್ಟ್ 8 (ಶನಿವಾರ) ರಂದು ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ರಜೆ ಅನ್ವಯವಾಗಲಿದೆ. ವಸತಿ ಶಾಲೆ ಹಾಗೂ ವಸತಿ ಕಾಲೇಜುಗಳಿಗೂ ಈ ಆದೇಶ ಅನ್ವಯವಾಗುತ್ತದೆ.

ಮಳೆಯ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಪಾಲಕರು ಮಕ್ಕಳನ್ನು ನದಿ, ಕೆರೆ, ತಗ್ಗು ಪ್ರದೇಶ ಹಾಗೂ ಸಮುದ್ರ ತೀರಗಳಿಗೆ ಹೋಗದಂತೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಿ, ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಸಲಾಗಿದೆ.
ಇದಲ್ಲದೆ, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ. ಸಂಬಂಧಪಟ್ಟ ಇಲಾಖೆಗಳು ಪ್ರತಿ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವ ಮೂಲಕ ತುರ್ತು ಪರಿಸ್ಥಿತಿಗೆ ಸನ್ನದ್ಧವಾಗಿರಬೇಕು ಎಂದು ಆದೇಶಿಸಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ತುರ್ತು ಸಹಾಯಕ್ಕಾಗಿ ಸಾರ್ವಜನಿಕರು ಟೋಲ್ ಫ್ರೀ 1077 ಅಥವಾ 0824-2442590 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
Holiday declared for schools and PU colleges in four taluks of Dakshina Kannada on Saturday due to heavy rain – ತುಳುಟೈಮ್ಸ್
ಇದನ್ನೂ ಓದಿ :ಹೈಕೋರ್ಟ್ ಮಧ್ಯಂತರ ಆದೇಶ: ಶಾಲಾ ಕ್ರೀಡಾಕೂಟಗಳು ತಾತ್ಕಾಲಿಕ ಮುಂದೂಡಿಕೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/IKW_z7twgxc











