ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಣ್ಣಿನಡಿ ಅಡಗಿತ್ತು ಚಿನ್ನದ ನಿಧಿ ; ಚಿನ್ನದ ನಾಣ್ಯ ನೋಡಿ ಅಧಿಕಾರಿಗಳೇ ಅಚ್ಚರಿ

ಬೆಳಗಾವಿ : Tulu Times l ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಿರ್ಮಾಣ ಕಾಮಗಾರಿ ವೇಳೆ ಕಾರ್ಮಿಕರಿಗೆ ಬರೋಬ್ಬರಿ 14 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಗ್ರಾಮದ ಬಿಸಿಎಂ ಹಾಸ್ಟೆಲ್ ಸಮೀಪ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಪಾತ್ರೆಯೊಂದರಲ್ಲಿ ಅಡಗಿಸಿಟ್ಟಿದ್ದ ಈ ನಾಣ್ಯಗಳು ಪತ್ತೆಯಾಗಿವೆ.

ಪತ್ತೆಯಾದ 14 ಚಿನ್ನದ ನಾಣ್ಯಗಳ ಒಟ್ಟು ತೂಕ 54.8 ಗ್ರಾಂ ಎಂದು ತಿಳಿದುಬಂದಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ ಇವುಗಳ ಮೌಲ್ಯ ಸುಮಾರು ₹8.27 ಲಕ್ಷ ಇರಬಹುದು ಎನ್ನಲಾಗಿದೆ. ನಾಣ್ಯಗಳು ದೊರೆತ ತಕ್ಷಣ ಕಾರ್ಮಿಕರು ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಸಿಬ್ಬಂದಿಯ ಸಮ್ಮುಖದಲ್ಲಿ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ್ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ತಹಶೀಲ್ದಾರ್ ಅವರು ಪತ್ತೆಯಾದ ಎಲ್ಲಾ ನಾಣ್ಯಗಳನ್ನು ಸರ್ಕಾರಿ ಖಜಾನೆಗೆ ಜಮಾ ಮಾಡಿದ್ದಾರೆ. ಇದೀಗ ಈ ಚಿನ್ನದ ನಾಣ್ಯಗಳ ಐತಿಹಾಸಿಕ ಹಿನ್ನೆಲೆ ಕುರಿತು ಕುತೂಹಲ ಮೂಡಿದೆ. ನಾಣ್ಯಗಳ ಮೇಲೆ ಆನೆಯ ಚಿತ್ರವಿರುವುದು ಕಂಡುಬಂದಿದ್ದು, ಇದು ತಲಕಾಡಿನ ಗಂಗ ರಾಜವಂಶದೊಂದಿಗೆ ಸಂಬಂಧ ಹೊಂದಿರಬಹುದೆಂಬ ಪ್ರಾಥಮಿಕ ಅನುಮಾನ ವ್ಯಕ್ತವಾಗಿದೆ. ಗಂಗರ ರಾಜಮುದ್ರೆ ಅಥವಾ ರಾಜಲಾಂಛನವಾಗಿ ಆನೆಯು ಪ್ರಮುಖ ಸ್ಥಾನ ಹೊಂದಿತ್ತು ಎಂಬ ಹಿನ್ನೆಲೆಯಲ್ಲಿ ಈ ಸಾಧ್ಯತೆ ಚರ್ಚೆಗೆ ಬಂದಿದೆ.

ಪ್ರಾಥಮಿಕ ಊಹೆಯಂತೆ ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿದವುಗಳಾಗಿರಬಹುದು ಎನ್ನಲಾಗುತ್ತಿದೆ. ಅಲ್ಲದೆ, ಅವು ಸುಮಾರು 800ರಿಂದ 1,000 ವರ್ಷಗಳಷ್ಟು ಹಳೆಯದಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ನಾಣ್ಯಗಳ ನಿಖರ ಕಾಲಘಟ್ಟ, ಮೂಲ ಹಾಗೂ ಐತಿಹಾಸಿಕ ಮಹತ್ವ ಇನ್ನೂ ಖಚಿತವಾಗಿಲ್ಲ.

ಪುರಾತತ್ವ ಇಲಾಖೆಯ ತಜ್ಞರಿಂದ ಸಮಗ್ರ ಪರಿಶೀಲನೆ ನಡೆದ ಬಳಿಕವೇ ನಾಣ್ಯಗಳ ನಿಜವಾದ ವಯಸ್ಸು, ಮೂಲ, ಐತಿಹಾಸಿಕ ಮಹತ್ವ ಹಾಗೂ ಅಧಿಕೃತ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಾಗಲಿದೆ. ಹೀಗಾಗಿ ಸವದತ್ತಿಯಲ್ಲಿ ಪತ್ತೆಯಾದ ಈ ಚಿನ್ನದ ನಾಣ್ಯಗಳು ಇದೀಗ ಇತಿಹಾಸದ ಹೊಸ ಕುತೂಹಲಕ್ಕೆ ಕಾರಣವಾಗಿವೆ.

A hoard of gold lay hidden underground; officials were astonished to see the gold coins – ತುಳುಟೈಮ್ಸ್

ಇದನ್ನೂ ಓದಿ :ಒಂದು ದಿನದ ಗುರುಜ್ಞಾನ, ಸಾವಿರ ದಿನಗಳ ಓದಿಗಿಂತ ಶ್ರೇಷ್ಠ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/EAlZlYPZOZI

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page