ವಿಶೇಷ : Tulu Times l ಜೀವನದಲ್ಲಿ ಕೆಲವು ಘಟನೆಗಳು ಒಬ್ಬ ವ್ಯಕ್ತಿಯ ಸಂಪೂರ್ಣ ಬದುಕನ್ನೇ ಬದಲಾಯಿಸಿಬಿಡುತ್ತವೆ. ತಮಿಳುನಾಡಿನ ಪೆಚ್ಚಿಯಮ್ಮಾಳ್ ಅವರ ಬದುಕೂ ಅಂತಹದ್ದೇ ಒಂದು ಕಥೆ. ಪತಿಯ ಅಕಾಲಿಕ ಮರಣ, ಸಮಾಜದ ಕಿರುಕುಳ ಮತ್ತು ಮಗಳ ಭವಿಷ್ಯದ ಚಿಂತೆಗಳ ನಡುವೆ ಅವರು ತೆಗೆದುಕೊಂಡ ನಿರ್ಧಾರ ಇಂದು ಅನೇಕರಿಗೆ ಆಶ್ಚರ್ಯ ಹಾಗೂ ಸ್ಪೂರ್ತಿಯ ವಿಷಯವಾಗಿದೆ.
ಗ್ರಾಮದಲ್ಲಿ ಎಲ್ಲರೂ ಅವರನ್ನು ಮುತ್ತು ಮಾಸ್ಟರ್ ಎಂದು ಕರೆಯುತ್ತಿದ್ದರು. ಹಿರಿಯ ಸಹೋದರನಿಗೆ ನೀಡುವ ಗೌರವದ ಈ ಹೆಸರಿನ ಹಿಂದೆ ಒಂದು ದೊಡ್ಡ ರಹಸ್ಯ ಅಡಗಿತ್ತು. ಏಕೆಂದರೆ ಮುತ್ತು ಮಾಸ್ಟರ್ ಆಗಿ ಬದುಕುತ್ತಿದ್ದ ವ್ಯಕ್ತಿ ವಾಸ್ತವವಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆಯಾಗಿದ್ದರು.

ಪೆಚ್ಚಿಯಮ್ಮಾಳ್ ಅವರಿಗೆ ಕೇವಲ 20 ವರ್ಷ ವಯಸ್ಸಾಗಿದ್ದಾಗ ಶಿವ ಎಂಬವರೊಂದಿಗೆ ವಿವಾಹವಾಗಿತ್ತು. ಆದರೆ, ಮದುವೆಯಾಗಿ ಕೇವಲ 15 ದಿನಗಳಲ್ಲೇ ಪತಿ ಹೃದಯಾಘಾತದಿಂದ ಮೃತಪಟ್ಟರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ತಾವು ಗರ್ಭಿಣಿಯಾಗಿರುವುದು ಅವರಿಗೆ ತಿಳಿಯಿತು. ಒಂಟಿಯಾಗಿ ಜೀವನ ಸಾಗಿಸುವ ಸವಾಲಿನ ನಡುವೆ ಮಗಳಿಗೆ ಜನ್ಮ ನೀಡಿದ ಅವರು, ಜೀವನ ನಿರ್ವಹಣೆಗಾಗಿ ತೂತುಕ್ಕುಡಿಯ ಕಲ್ಲಿದ್ದಲು ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದರು.
ಒಂದು ಘಟನೆ ಬದಲಿಸಿತು ಬದುಕಿನ ದಿಕ್ಕು ;
ಒಂದು ದಿನ ಕೆಲಸಕ್ಕೆ ಹೋಗುತ್ತಿದ್ದಾಗ ಲಾರಿ ಚಾಲಕನೊಬ್ಬ ಬಲವಂತವಾಗಿ ವಾಹನಕ್ಕೆ ಎಳೆದುಕೊಂಡು ಹೋಗಲು ಯತ್ನಿಸಿದ್ದಾನೆ. ಈ ಘಟನೆ ಪೆಚ್ಚಿಯಮ್ಮಾಳ್ ಅವರನ್ನು ತೀವ್ರವಾಗಿ ಕಂಗೆಡಿಸಿತು. ಆ ರಾತ್ರಿ ಪೂರ್ತಿ ನಡೆದ ಘಟನೆಯ ಬಗ್ಗೆ ಯೋಚಿಸಿದ ಅವರು ಮರುದಿನವೇ ಒಂದು ನಿರ್ಧಾರ ಕೈಗೊಂಡರು. ಅಂಗಿ ಮತ್ತು ಧೋತಿ ಖರೀದಿಸಿ, ತಿರುಚೆಂದೂರಿಗೆ ತೆರಳಿ ತಲೆ ಕೂದಲು ಕತ್ತರಿಸಿಕೊಂಡರು. ದೇವಾಲಯಕ್ಕೆ ಕೊನೆಯ ಬಾರಿಗೆ ಮಹಿಳೆಯಾಗಿ ಭೇಟಿ ನೀಡಿ, ಅಲ್ಲಿಂದ ಪುರುಷರ ಉಡುಪಿನಲ್ಲಿ ಹೊರಬಂದರು. ಆ ದಿನ ಪೆಚ್ಚಿಯಮ್ಮಾಳ್ ಅಂತ್ಯಗೊಂಡಳು. ನಾನು ಮುತು ಆಗಿ ಹುಟ್ಟಿಕೊಂಡೆ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಮಗಳಿಗೂ ಗೊತ್ತಿರಲಿಲ್ಲ ಸತ್ಯ ;
ನಂತರ ಮುತ್ತು ಮಾಸ್ಟರ್ ಎಂಬ ಹೆಸರಿನಿಂದ ಹೋಟೆಲ್‌ನಲ್ಲಿ ಅಡುಗೆಗಾರರಾಗಿ ಕೆಲಸ ಆರಂಭಿಸಿದರು. ಕೆಲವು ವರ್ಷಗಳ ಬಳಿಕ ಚೆನ್ನೈಗೆ ತೆರಳಿ, ನಂತರ 10 ವರ್ಷದ ಮಗಳೊಂದಿಗೆ ತಮ್ಮ ಊರಿಗೆ ಮರಳಿದರು. ಗ್ರಾಮದಲ್ಲಿ ಯಾರಿಗೂ ಅವರ ನಿಜವಾದ ಗುರುತು ಗೊತ್ತಿರಲಿಲ್ಲ. ಆಶ್ಚರ್ಯದ ಸಂಗತಿ ಎಂದರೆ, ಅವರ ಮಗಳಿಗೂ ತಾಯಿಯ ನಿಜವಾದ ಗುರುತು ಏಳು ವರ್ಷ ವಯಸ್ಸಾಗುವವರೆಗೆ ತಿಳಿದಿರಲಿಲ್ಲ.
ಪುರುಷನ ವೇಷವೇ ರಕ್ಷಣೆಯ ಕವಚ;
ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ದುಡಿದ ಮುತ್ತು ಮಾಸ್ಟರ್ ತಮ್ಮ ಶ್ರಮ ಮತ್ತು ಪ್ರಾಮಾಣಿಕತೆಯಿಂದ ಎಲ್ಲರ ಗೌರವ ಗಳಿಸಿದರು. ಆದರೆ ಪುರುಷನಾಗಿ ಬದುಕುವುದು ಸುಲಭವಾಗಿರಲಿಲ್ಲ. ಸಾರ್ವಜನಿಕ ಸ್ಥಳಗಳು, ಶೌಚಾಲಯಗಳು ಹಾಗೂ ಸಾಮಾಜಿಕ ಒತ್ತಡಗಳ ನಡುವೆ ಅವರು ನಿರಂತರ ಎಚ್ಚರಿಕೆಯಿಂದ ಬದುಕಬೇಕಾಯಿತು. ಪುರುಷರ ಉಡುಪು ನನಗೆ ರಕ್ಷಣೆ ನೀಡಿತು ಎಂದು ಅವರು ಹೇಳುತ್ತಾರೆ. ತಮ್ಮ ಗುರುತನ್ನು ಉಳಿಸಿಕೊಳ್ಳಲು ಬೀಡಿ ಸೇದುವ ಅಭ್ಯಾಸವನ್ನೂ ರೂಢಿಸಿಕೊಂಡಿದ್ದರು. ಇದರಿಂದ ಜನರು ಅವರನ್ನು ಸಾಮಾನ್ಯ ಪುರುಷನೆಂದು ಭಾವಿಸುತ್ತಿದ್ದರು.
ಮಗಳು ಬೆಳೆದು ವಿವಾಹವಾದ ಬಳಿಕವೂ ಪೆಚ್ಚಿಯಮ್ಮಾಳ್ ತಮ್ಮ ಹಳೆಯ ಗುರುತಿಗೆ ಮರಳಲಿಲ್ಲ. ಆರಂಭದಲ್ಲಿ ಸುರಕ್ಷತೆಗಾಗಿ ತೆಗೆದುಕೊಂಡ ನಿರ್ಧಾರವೇ ನಂತರ ಅವರ ಜೀವನದ ಭಾಗವಾಗಿ ಬದಲಾಯಿತು. ಇಂದು 37 ವರ್ಷಗಳಿಂದ ಮುತ್ತು ಮಾಸ್ಟರ್ ಆಗಿ ಬದುಕುತ್ತಿರುವ ಅವರು, ಈ ರೂಪ ನನಗೆ ಧೈರ್ಯ ನೀಡಿತು, ರಕ್ಷಣೆ ನೀಡಿತು. ಈಗ ನನ್ನ ಕೊನೆಯ ದಿನದವರೆಗೂ ಮುತುವಾಗಿಯೇ ಬದುಕಲು ಬಯಸುತ್ತೇನೆ ಎಂದು ಹೇಳುತ್ತಾರೆ.
ಪೆಚ್ಚಿಯಮ್ಮಾಳ್ ಅವರ ಕಥೆ ಕೇವಲ ಒಬ್ಬ ಮಹಿಳೆಯ ಹೋರಾಟವಲ್ಲ. ಅದು ಮಹಿಳೆಯರ ಸುರಕ್ಷತೆ, ಸಮಾಜದ ಮನೋಭಾವ ಮತ್ತು ಬದುಕಿಗಾಗಿ ಮನುಷ್ಯ ಎಷ್ಟರ ಮಟ್ಟಿಗೆ ಬದಲಾಗಬಹುದು ಎಂಬುದನ್ನು ತೋರಿಸುವ ನೈಜ ಜೀವನದ ಕಥೆಯಾಗಿದೆ. ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿ ಮಗಳನ್ನು ಬೆಳೆಸಿದ ಅವರ ಬದುಕು ಅನೇಕರಿಗೆ ಪ್ರೇರಣೆಯಾಗಿದೆ.
A woman who lived as a man for 37 years; a story that holds a mirror up to society – ತುಳುಟೈಮ್ಸ್
ಇದನ್ನೂ ಓದಿ :ಆಹಾರದಿಂದ ಹೆಸರಿನವರೆಗೆ ವಿವಾದ; ಎನ್‌ಸಿಇಆರ್‌ಟಿ ಪುಸ್ತಕಕ್ಕೆ ಆಕ್ಷೇಪ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/OMCY194x_LY?feature=share











