ಚೆನ್ನೈ: Tulu Times l ತಮಿಳುನಾಡಿನ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ಅನಿಶ್ಚಿತತೆಗೆ ಕೊನೆ ಬಿದ್ದಿದ್ದು, ನಟರಿಂದ ರಾಜಕಾರಣಿಯಾಗಿರುವ ‘ತಳಪತಿ’ ವಿಜಯ್ ಇದೀಗ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಭಾನುವಾರ (ಮೇ 10) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ ಆರಂಭದಲ್ಲಿ 108 ಸ್ಥಾನಗಳನ್ನು ಗೆದ್ದಿತ್ತು. ಬಳಿಕ ಒಂದು ಕ್ಷೇತ್ರ ಖಾಲಿಯಾದ ಕಾರಣ ಪಕ್ಷದ ಬಲ 107ಕ್ಕೆ ಇಳಿದಿತ್ತು. ಸರ್ಕಾರ ರಚನೆಗೆ ಅಗತ್ಯವಿದ್ದ 118 ಸದಸ್ಯರ ಬೆಂಬಲಕ್ಕಾಗಿ ವಿಜಯ್ ಹಲವು ಪಕ್ಷಗಳೊಂದಿಗೆ ಮಾತುಕತೆ ನಡೆಸಿದ್ದರು. ಈಗಾಗಲೇ ಕಾಂಗ್ರೆಸ್ ತನ್ನ 5 ಶಾಸಕರ ಬೆಂಬಲ ಘೋಷಿಸಿದ್ದರೆ, CPI ಹಾಗೂ CPI(M) ತಲಾ 2 ಶಾಸಕರ ಬೆಂಬಲ ನೀಡಿದ್ದವು. ಶನಿವಾರ VCK ಮತ್ತು IUML ಕೂಡ ಬೆಂಬಲ ಘೋಷಿಸಿದ ಪರಿಣಾಮ ಒಟ್ಟು ಬೆಂಬಲ ಸಂಖ್ಯೆ 120ಕ್ಕೆ ಏರಿದೆ.
ಪೂರ್ಣ ಬಹುಮತದ ಬೆಂಬಲ ಪತ್ರಗಳೊಂದಿಗೆ ವಿಜಯ್ ಶನಿವಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ನಾಲ್ಕನೇ ಬಾರಿ ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಶಾಸಕರ ಬೆಂಬಲ ಪತ್ರಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಪಾಲರು ಸರ್ಕಾರ ರಚನೆಗೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭ ಭಾನುವಾರ ಬೆಳಗ್ಗೆ 10 ಗಂಟೆಗೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆಯಲಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ವಿಜಯ್ ಅವರಿಗೆ ಮುಖ್ಯಮಂತ್ರಿ ಪದವಿಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
The date for the swearing in of the new Chief Minister of Tamil Nadu has been fixed – ತುಳುಟೈಮ್ಸ್
ಇದನ್ನೂ ಓದಿ :ಎಂಐಆರ್‌ವಿ ತಂತ್ರಜ್ಞಾನದೊಂದಿಗೆ ಅತ್ಯಾಧುನಿಕ ಅಗ್ನಿ ಕ್ಷಿಪಣಿ ಪರೀಕ್ಷೆ ಯಶಸ್ವಿ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/aXVlBmax000?si=d7sxuc8-xhHzDO-V











