ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಶಾಲೆ–ಆಸ್ಪತ್ರೆಗಳಲ್ಲಿ ಜಂಕ್ ಫುಡ್‌ಗೆ ಬ್ರೇಕ್?; ಪೌಷ್ಟಿಕ ಆಹಾರಕ್ಕೆ ಸರ್ಕಾರದ ಒತ್ತು

ಬೆಂಗಳೂರು : Tulu Times l ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸುವ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳ ಆವರಣದಲ್ಲಿ ಜಂಕ್ ಫುಡ್ ಮಾರಾಟಕ್ಕೆ ನಿಷೇಧ ಹೇರಲು ಮುಂದಾಗಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಮಾಹಿತಿ ನೀಡಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ಪೌಷ್ಟಿಕ ಆಹಾರವನ್ನು ಮಾತ್ರ ನಿಯಂತ್ರಿತ ಹಾಗೂ ಕೈಗೆಟಕುವ ದರದಲ್ಲಿ ಮಾರಾಟ ಮಾಡಲು ಅವಕಾಶ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತಾವಿತ ನಿಯಮವು 1ರಿಂದ 10ನೇ ತರಗತಿವರೆಗೆ ಇರುವ ಶಾಲೆಗಳಿಗೆ ಅನ್ವಯವಾಗಲಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸ ಬೆಳೆಸಿದರೆ ಅವರ ದೈಹಿಕ ಬೆಳವಣಿಗೆ ಉತ್ತಮವಾಗುವುದರ ಜೊತೆಗೆ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಪ್ರಸ್ತಾವನೆಯಂತೆ ಶಾಲೆ ಹಾಗೂ ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಪಿಜ್ಜಾ, ಬರ್ಗರ್, ಕಾರ್ಬೊನೇಟೆಡ್ (ತಂಪು ಪಾನೀಯಗಳು) ಸೇರಿದಂತೆ ಜಂಕ್ ಫುಡ್‌ಗಳ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಅವುಗಳ ಬದಲಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಮಾತ್ರ ಕಡಿಮೆ ಅಥವಾ ನಿಯಂತ್ರಿತ ದರದಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ.

ಶಾಲೆ ಮತ್ತು ಆಸ್ಪತ್ರೆಗಳ ಆವರಣದಲ್ಲಿ ಜಂಕ್ ಫುಡ್ ಸುಲಭವಾಗಿ ಲಭ್ಯವಾಗುತ್ತಿರುವುದು ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೇ ಕ್ಯಾನ್ಸರ್, ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ತೊಂದರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಪರಿಗಣಿಸಲಾಗಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ ಶಾಲಾ ಮಕ್ಕಳು, ರೋಗಿಗಳು ಹಾಗೂ ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರಿಗೆ ಆರೋಗ್ಯಕರ ಆಹಾರ ಲಭ್ಯವಾಗುವ ಜೊತೆಗೆ ಉತ್ತಮ ಆಹಾರ ಸಂಸ್ಕೃತಿಯನ್ನು ಉತ್ತೇಜಿಸಲು ಸಹಕಾರಿಯಾಗಲಿದೆ.

Ban on junk food in schools and hospitals? Government emphasizes nutritious food. – ತುಳುಟೈಮ್ಸ್

ಇದನ್ನೂ ಓದಿ :ವಿಜಯ್ ಕೊನೆಯ ಚಿತ್ರಕ್ಕೆ ಅಭಿಮಾನಿಗಳ ಕ್ರೇಜ್; ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ದರ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://tulutimes.com/10039/belthangady/leopard-enters-cattle-shed-in-bandaru-attacks-calf/

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page