ಬ್ರೇಕಿಂಗ್ ನ್ಯೂಸ್
ಸುಳ್ಯ

ಅರಂತೋಡು : ಹಳೆಯ ನೆನಪುಗಳಿಗೆ ಜೀವ ತುಂಬಿದ ಅಡ್ತಲೆಯ ಆಟಿ ಕೂಟ

ಅಡ್ತಲೆ: Tulu Times l ಚಂದನ ಯುವತಿ ಮಂಡಲ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆಟಿ ಕೂಟವು ಸಡಗರ ಹಾಗೂ ಸಂಭ್ರಮದಿಂದ ನಡೆಯಿತು. ಅರಂತೋಡು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಪಂದನ ಗೆಳೆಯರ ಬಳಗ ಅಡ್ತಲೆಯ ಅಧ್ಯಕ್ಷ ವಿನಯ್ ಬೆದ್ರುಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಮುಖ್ಯೋಪಾಧ್ಯಾಯಿನಿ ಬೊಮ್ಮಕ್ಕ ಪಿಂಡಿಮನೆ ಅವರು ಆಟಿ ತಿಂಗಳ ವಿಶೇಷತೆ, ಅದರೊಂದಿಗೆ ಬೆಸೆದುಕೊಂಡಿರುವ ಆಚರಣೆಗಳು ಹಾಗೂ ಹಿಂದಿನ ಕಾಲದ ಜೀವನ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಅಡ್ತಲೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಲೋಹಿತ್ ಮೇಲಡ್ತಲೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ನಾಗರಿಕ ಹಿತರಕ್ಷಣಾ ಸಂಘದ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಹಾಗೂ ಚಂದನ ಯುವತಿ ಮಂಡಲದ ಅಧ್ಯಕ್ಷೆ ಸರಸ್ವತಿ ಅಡ್ತಲೆ ಅವರು ಮಾತನಾಡಿ, ಆಟಿ ತಿಂಗಳ ಆಚರಣೆಗಳು ನಮ್ಮ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಹೊಂದಿರುವ ನಂಟನ್ನು ವಿವರಿಸಿದರು.

ಆಟಿ ಕೂಟದ ಅಂಗವಾಗಿ ವಿವಿಧ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಗಿದ್ದು, ಚೆನ್ನೆಮಣೆ ಆಟ ವಿಶೇಷ ಆಕರ್ಷಣೆಯಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರು ಉತ್ಸಾಹದಿಂದ ಆಟವಾಡಿ ಸಂಭ್ರಮಿಸಿದರು. ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಚಂದನ ಯುವತಿ ಮಂಡಲದ ಸದಸ್ಯರು ಆಟಿ ತಿಂಗಳ ವಿಶೇಷವಾದ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಮನೆಯಿಂದಲೇ ತಯಾರಿಸಿ ತಂದಿದ್ದರು. ವಿವಿಧ ಬಗೆಯ ಸ್ಥಳೀಯ ಖಾದ್ಯಗಳ ಸವಿಯೂಟದ ಮೂಲಕ ಭಾಗವಹಿಸಿದವರು ಆಟಿ ಸಂಭ್ರಮವನ್ನು ಹಂಚಿಕೊಂಡರು.

ಕಾರ್ಯಕ್ರಮದ ಆರಂಭದಲ್ಲಿ ಡಯಾನಾ ಬೆದ್ರುಪಣೆ ಪ್ರಾರ್ಥನೆ ನೆರವೇರಿಸಿದರು. ರೇಖಾ ಪಾನತ್ತಿಲ ಸ್ವಾಗತಿಸಿದರು. ಅಶ್ವಿನಿ ಪಿಂಡಿಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಪ್ರದಾಯಿಕ ಆಚರಣೆಗಳು, ಗ್ರಾಮೀಣ ಆಟಗಳು, ಮನರಂಜನೆ ಹಾಗೂ ಆಟಿ ವಿಶೇಷ ಖಾದ್ಯಗಳ ಸವಿಯೂಟದೊಂದಿಗೆ ನಡೆದ ಕಾರ್ಯಕ್ರಮವು ಹಳೆಯ ಕಾಲದ ಜೀವನಶೈಲಿ ಮತ್ತು ನಾಡಿನ ಸಂಸ್ಕೃತಿ–ಪರಂಪರೆಯನ್ನು ನೆನಪಿಸುವ ಅರ್ಥಪೂರ್ಣ ಕೂಟವಾಗಿ ಮೂಡಿಬಂತು.

Aranthodu: Adtale’s ‘Aati Koota’ breathes life into old memories – ತುಳುಟೈಮ್ಸ್

ಇದನ್ನೂ ಓದಿ :ಹೋಟೆಲ್‌ಗಳ ವಿರುದ್ಧ ಫುಡ್ ಸೇಫ್ಟಿ ಸಮರ; ರಾಜ್ಯಾದ್ಯಂತ ದಾಳಿ ತೀವ್ರ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 14

You cannot copy content of this page