ಪಂಜ: Tulu Times l ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಪಂಜ ಪಂಚಶ್ರೀ ಹಾಗೂ ಲಯನ್ಸ್ ಕ್ಲಬ್ ಪಂಜ ಇವರ ಸಂಯುಕ್ತ ಆಶ್ರಯದಲ್ಲಿ ‘ಆಟಿ ನೆಂಪು–2026’ ಕಾರ್ಯಕ್ರಮವನ್ನು ಆಗಸ್ಟ್ 9ರಂದು (ಭಾನುವಾರ) ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಆಟಿ ತಿಂಗಳ ಸಂಪ್ರದಾಯ, ಆಹಾರ ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಆಹಾರ ಖಾದ್ಯ ಸ್ಪರ್ಧೆ ನಡೆಯಲಿದ್ದು, ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳನ್ನು ತಯಾರಿಸುವ ಪ್ರತಿಭಾವಂತರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.

ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದೆ. ಮೊದಲ ವಿಭಾಗದಲ್ಲಿ ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳು ಹಾಗೂ ಎರಡನೇ ವಿಭಾಗದಲ್ಲಿ ಇತರ ವಿಶೇಷ ತಿಂಡಿ-ತಿನಿಸುಗಳನ್ನು ಒಳಗೊಂಡಿರುತ್ತದೆ. ಸ್ಪರ್ಧೆಗೆ ಸಿದ್ಧಪಡಿಸಿದ ತಿನಿಸುಗಳನ್ನು ಬೆಳಗ್ಗೆ 10 ಗಂಟೆಯೊಳಗೆ ಸ್ಪರ್ಧಾ ಸ್ಥಳಕ್ಕೆ ತಂದು ಸಲ್ಲಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ. ಆಟಿ ತಿಂಗಳ ವಿಶೇಷ ತಿನಿಸುಗಳಾದ ಪತ್ರೊಡೆ, ಕಣಿಲೆ ಪಲ್ಯ, ನೆನ್ನೆರಿ, ತಜಂಕ್ ಪಲ್ಯ ಹಾಗೂ ಆಟಿ ಪಾಯಸಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಎರಡೂ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಆಯ್ಕೆಯಾಗುವ ಐದು ತಿನಿಸುಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನ ಹಾಗೂ ಪ್ರಶಂಸಾ ಪ್ರಮಾಣಪತ್ರ ವಿತರಿಸಲಾಗುವುದು.
ಆಟಿ ತಿಂಗಳ ಆಹಾರ ಪದ್ಧತಿಗಳು ಆರೋಗ್ಯದ ದೃಷ್ಟಿಯಿಂದಲೂ ವಿಶೇಷ ಮಹತ್ವ ಹೊಂದಿದ್ದು, ಸ್ಥಳೀಯವಾಗಿ ದೊರೆಯುವ ಔಷಧೀಯ ಗುಣಗಳಿರುವ ಸೊಪ್ಪು, ತರಕಾರಿ ಹಾಗೂ ನೈಸರ್ಗಿಕ ಪದಾರ್ಥಗಳಿಂದ ತಯಾರಾಗುವ ಈ ತಿನಿಸುಗಳು ಕರಾವಳಿ ಮತ್ತು ಮಲೆನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿವೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಆಟಿ ನಂಪು–2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ 99724 13766 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮದ ನಿರ್ವಹಣೆಯ ಹೊಣೆ ಹೊತ್ತಿರುವ ಜೇಸಿ ದೇವಿಪ್ರಸಾದ್ ಜಾಕೆ ತಿಳಿಸಿದ್ದಾರೆ.
Panja: Invitation to the traditional ‘Aati’ month food dish competition. – ತುಳು ಟೈಮ್ಸ್
ಇದನ್ನೂ ಓದಿ : ಶೀತ, ಕೆಮ್ಮಿನಿಂದ ಬೇಗ ಗುಣಮುಖರಾಗಲು ಈ ಮನೆಮದ್ದುಗಳನ್ನು ಅನುಸರಿಸಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/U16SY5xkjFY











