ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಕ್ಕಳ ಮೇಲಿನ ಕ್ರೌರ್ಯ ಆರೋಪ: ಡೇಕೇರ್ ಸಿಬ್ಬಂದಿ ನಾಪತ್ತೆ, ತನಿಖೆ ತೀವ್ರ

ಬೆಂಗಳೂರು: Tulu Times l ನಗರದ ಬ್ರೂಕ್‌ಫೀಲ್ಡ್‌ನ ಎಚ್‌ಎಎಲ್‌ ಕ್ಯಾಂಪಸ್‌ನಲ್ಲಿರುವ ಕ್ಯಾಪ್‌ಜೆಮಿನಿ ಟೆಕ್ನಾಲಜಿ ಸರ್ವೀಸಸ್ ಇಂಡಿಯಾ ಆವರಣದ ಡೇಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳ ಮೇಲೆ ನಡೆದಿತ್ತೆನ್ನಲಾದ ದೌರ್ಜನ್ಯ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದೂರು ದಾಖಲಿಸಿಕೊಂಡಿದ್ದು, ಪೊಲೀಸರು ಡೇಕೇರ್ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ಕಂಪನಿ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ವೈರಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡ ಮಹಿಳಾ ಆರೈಕೆ ಸಿಬ್ಬಂದಿ ಎಫ್‌ಐಆರ್ ದಾಖಲಾದ ಬಳಿಕ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಈ ಡೇಕೇರ್ ಕೇಂದ್ರದಲ್ಲಿ ಸುಮಾರು 18 ಮಕ್ಕಳು ದಾಖಲಾಗಿದ್ದು, ಕಂಪನಿಯ ಉದ್ಯೋಗಿಗಳು ಕೆಲಸದ ಸಮಯದಲ್ಲಿ ತಮ್ಮ ಮಕ್ಕಳನ್ನು ಇಲ್ಲಿ ಬಿಡುತ್ತಿದ್ದರು. ಮಂಗಳವಾರ ರಾತ್ರಿ ಐವರು ಮಹಿಳಾ ಆರೈಕೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರು ಪುಟ್ಟ ಮಕ್ಕಳ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸಿರುವ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳು ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ದಾಖಲಿಸಲಾಗಿದೆ. ಬುಧವಾರ ಎಚ್‌ಎಎಲ್‌ ಠಾಣೆ ಪೊಲೀಸರು ಡೇಕೇರ್ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ತನಿಖೆಯನ್ನು ಪಿಎಸ್‌ಐ ವಿದ್ಯಾ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ. ದೂರುದಾರ, ಮೂವರು ಸಿಬ್ಬಂದಿ ಹಾಗೂ ಡೇಕೇರ್ ಆಡಳಿತಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಆದರೆ ವೈರಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡ ಮಹಿಳೆಯರು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡೇಕೇರ್ ನಿರ್ವಹಣೆಯವರನ್ನು ವಿಚಾರಣೆಗೆ ಕರೆದಿದ್ದು, ಕಂಪನಿಯ ಆಡಳಿತ ವಿಭಾಗಕ್ಕೂ ನೋಟಿಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಡೇಕೇರ್‌ನಲ್ಲೇ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಈ ಘಟನೆಗಳನ್ನು ಮೊಬೈಲ್‌ನಲ್ಲಿ ದಾಖಲಿಸಿ ಮಕ್ಕಳ ಸಹಾಯವಾಣಿಗೆ ಕಳುಹಿಸಿದ್ದರು. ಅದರ ಆಧಾರದ ಮೇಲೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಆರಂಭಿಸಲಾಗಿದೆ.

ದೂರಿನ ಪ್ರಕಾರ, ಅಳುತ್ತಿದ್ದ ಅಥವಾ ಚಂಚಲವಾಗಿದ್ದ ಎರಡರಿಂದ ಮೂರು ವರ್ಷದ ಮಕ್ಕಳನ್ನು ಸಮಾಧಾನಪಡಿಸುವ ಬದಲು ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದರು. ವೈರಲ್ ವಿಡಿಯೋಗಳಲ್ಲಿ ಮಕ್ಕಳನ್ನು ಫ್ರಂಟ್ ಲೋಡಿಂಗ್ ವಾಷಿಂಗ್ ಮೆಷಿನ್ ಒಳಗೆ ಇರಿಸುವುದು, ಪಾಶ್ಚಾತ್ಯ ಶೌಚಾಲಯದ ಮೇಲೆ ಕೂರಿಸುವುದು, ಟಾಯ್ಲೆಟ್ ಜೆಟ್ ಸ್ಪ್ರೇ ಮೂಲಕ ಬಾಯಿಗೆ ನೀರು ಸಿಂಪಡಿಸುವುದು, ಬಾತ್‌ರೂಮ್‌ನಲ್ಲಿ ಕೂಡಿ ಹಾಕಿ ಬಾಗಿಲು ಮುಚ್ಚುವುದು ಹಾಗೂ ಮೌನವಾಗಿರಲು ಬೆದರಿಕೆ ಹಾಕುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಆರೋಪಿಸಲಾಗಿದೆ. ಈ ಘಟನೆಗಳು ಇತ್ತೀಚಿನವುಗಳಲ್ಲ, ಕೆಲವು ಸಮಯದ ಹಿಂದೆ ನಡೆದಿರಬಹುದೆಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಘಟನೆ ನಡೆದ ನಿಖರ ಸಮಯವನ್ನು ಪತ್ತೆಹಚ್ಚಲು ವಿಡಿಯೋಗಳು ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಇದೀಗ ಡೇಕೇರ್ ಕೇಂದ್ರವು ಹೊಸ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದ ಸಂಪೂರ್ಣ ಸತ್ಯಾಂಶವನ್ನು ಬಹಿರಂಗಪಡಿಸಲು ಪೊಲೀಸರು ಸಾಕ್ಷ್ಯ ಸಂಗ್ರಹ, ದಾಖಲೆ ಪರಿಶೀಲನೆ ಮತ್ತು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

Allegations of cruelty towards children: Daycare staff missing, investigation intensified. – ತುಳು ಟೈಮ್ಸ್

ಇದನ್ನೂ ಓದಿ : ನೀಟ್ ಶುಲ್ಕ ಮರುಪಾವತಿ: ಬ್ಯಾಂಕ್ ವಿವರ ತಿದ್ದುಪಡಿಗೆ ಜುಲೈ 7ರವರೆಗೆ ಕೊನೆಯ ಅವಕಾಶ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/MbYWc25CAMY?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page