ಸುಳ್ಯ : Tulu Times l ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಆಟಿ ತಿಂಗಳ ವಿಶೇಷತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ‘ಆಟಿ ಉತ್ಸವ–2026’ ಅನ್ನು ಶುಕ್ರವಾರ (ಜೂ.17) ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್, ಸುಳ್ಯದ ಪ್ರಾಂಶುಪಾಲ ಅನೀಶ್ ನಾದ್ ಇ.ಎಂ. ಅವರು ಮಾತನಾಡಿ, ಇಂದಿನ ಯುವಜನತೆ ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಆಚರಣೆಗಳನ್ನು ಅರಿತು ಸಂರಕ್ಷಿಸಬೇಕಾದ ಅಗತ್ಯವಿದೆ. ಆಟಿ ಉತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸುವುದರ ಜೊತೆಗೆ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧಾ ರಾಮಚಂದ್ರ ಮಾತನಾಡಿ, ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಆಟಿ ತಿಂಗಳ ಆಚರಣೆಯ ಮಹತ್ವ, ಅದರ ಹಿಂದಿರುವ ಜೀವನ ಮೌಲ್ಯಗಳು ಹಾಗೂ ಸಂಪ್ರದಾಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಕಲ್ಲಾಟ, ಚೆನ್ನಮಣೆ, ಫೇಸ್ ಪೇಂಟಿಂಗ್, ಹ್ಯಾಂಗಿಂಗ್ ಡೆಕೊರೇಶನ್, ಆಟಿ ಆಹಾರಗಳ ಪ್ರದರ್ಶನ, ಜನಪದ ಗೀತೆ ಹಾಗೂ ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಆಟಿ ತಿಂಗಳ ವಿಶೇಷ ಆಹಾರಗಳು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳು ಎಲ್ಲರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಆಟಿ ಉತ್ಸವದ ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ‘ಸುದ್ದಿ ಬಿಡುಗಡೆ’ ಸುಳ್ಯದ ವರದಿಗಾರ್ತಿ ಹಾಗೂ ಜಾಹೀರಾತು ಸಂಯೋಜಕಿ ಪೂಜಾಶ್ರೀ ವಿತೇಶ್ ಕೋಡಿ, ಇನ್ನರ್ ವೀಲ್ ಕ್ಲಬ್ ಸದಸ್ಯೆ ಚಿಂತನಾ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ ಲತಾ ಮಧುಸೂಧನ್, ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಚಿತ್ರಕಲಾ ಶಿಕ್ಷಕ ಮೆಲ್ವಿನ್, ರಂಗಭೂಮಿ ಕಲಾವಿದ ರಾಜ್ ಮುಖೇಶ್ ಹಾಗೂ ನೃತ್ಯ ಕಲಾವಿದೆ ಲಿಖಿತಾ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಆರ್., ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಭವ್ಯ ಸಿ.ಟಿ. ಅವರು ಗಣ್ಯರು, ಅತಿಥಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಮಲ್ಲಿಕಾ ಎಂ.ಎಲ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Sulya KVG Amarajyoti College; A grand tribute to the culture of Tulunad by the students – ತುಳುಟೈಮ್ಸ್
ಇದನ್ನೂ ಓದಿ :ಉಪ್ಪಿನಂಗಡಿ ಸಮೀಪ ಧಗ ಧಗನೇ ಹೊತ್ತಿ ಉರಿದ ಕೋಟಿ ಬೆಲೆಯ ಕಾರು!
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/post/Ugkx_PjoUeV274iC9sujFsUXloanMWDjBvQQ?si=Z92or8iB4xhK4_NO











