ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ: 3 ಸಾವು, ಹಲವರು ನಾಪತ್ತೆ

ಕೇರಳ : Tulu Times l ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಸಮೀಪದ ಅನಕ್ಕಂಪೊಯಿಲ್–ಮೆಪ್ಪಾಡಿ ಸುರಂಗ ಯೋಜನೆ ಕಾಮಗಾರಿ ಪ್ರದೇಶದಲ್ಲಿ ಮಂಗಳವಾರ ಭಾರೀ ಭೂಕುಸಿತ ಸಂಭವಿಸಿದ್ದು, 3 ಸಾವು, ಏಳು ಮಂದಿ ನಾಪತ್ತೆಯಾಗಿದ್ದು, ಏಳು ಮಂದಿಯನ್ನು ರಕ್ಷಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ. ಮೀನಾಕ್ಷಿ ಸೇತುವೆ ಸಮೀಪ ಈ ದುರ್ಘಟನೆ ಸಂಭವಿಸಿದೆ. ಕಳೆದ ವರ್ಷದಿಂದ ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. 2024ರಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದ ಮುಂಡಕ್ಕೈ ಪ್ರದೇಶದ ಸಮೀಪವೇ ಈ ಕಾಮಗಾರಿ ನಡೆಯುತ್ತಿರುವುದು ಆತಂಕ ಹೆಚ್ಚಿಸಿದೆ. ಸ್ಥಳೀಯರು ಆರಂಭದಲ್ಲಿ ಮೂವರು ಕಾರ್ಮಿಕರನ್ನು ರಕ್ಷಿಸಿದ್ದು, ಬಳಿಕ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿದರು. ಕಾಮಗಾರಿ ಪ್ರದೇಶದ ಸಮೀಪ ಕೆಲವು ಮನೆಗಳು ಹಾಗೂ ಹೋಂಸ್ಟೇಗಳೂ ಇರುವುದರಿಂದ ಇನ್ನಷ್ಟು ಮಂದಿ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ವಯನಾಡು ಪ್ರದೇಶದಲ್ಲಿ ಸುಮಾರು 265 ಮಿ.ಮೀ. ಮಳೆ ದಾಖಲಾಗಿದ್ದು, ಭಾರೀ ಮಳೆಯಿಂದ ಕಾಮಗಾರಿ ಪ್ರದೇಶದ ಮಣ್ಣು ಕುಸಿದು ರಸ್ತೆಗಳನ್ನು ಮುಚ್ಚಿದೆ. ಭೂಕುಸಿತದಲ್ಲಿ ಕಾಮಗಾರಿಗೆ ಬಳಸುತ್ತಿದ್ದ ಹಲವು ವಾಹನಗಳು ಕೂಡ ಹಾನಿಗೊಳಗಾಗಿವೆ. ಈ ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ ನಡೆಸಿ, ರಕ್ಷಣಾ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಹಾಗೂ ಕೃಷಿ ಸಚಿವ ಟಿ. ಸಿದ್ದೀಕ್ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಇದೇ ವೇಳೆ ಸಚಿವ ಟಿ. ಸಿದ್ದೀಕ್, ಇದು ನೈಸರ್ಗಿಕ ಭೂಕುಸಿತವಲ್ಲ, ಮಾನವ ನಿರ್ಮಿತ ಭೂಕುಸಿತ ಎಂದು ಆರೋಪಿಸಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಸಂಭವಿಸಬಹುದಾದ ಭೂಕುಸಿತದ ಬಗ್ಗೆ ಜಿಲ್ಲಾಧಿಕಾರಿಗಳು ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಎನ್‌ಡಿಆರ್‌ಎಫ್‌ನ ಎರಡು ತಂಡಗಳು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತದ ಸಿಬ್ಬಂದಿ ಜಂಟಿಯಾಗಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Massive landslide in Wayanad, Kerala: 3 dead, many missing. – ತುಳು ಟೈಮ್ಸ್

ಇದನ್ನೂ ಓದಿ : ಇ-25 ಪೆಟ್ರೋಲ್ ಜಾರಿಗೆ ಯಾವುದೇ ನಿರ್ಧಾರವಿಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zL6G6JE_ZwA

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page