ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೊಡಗು : ದುಬಾರೆಯಲ್ಲಿ ಸಾಕಾನೆಗಳ ನಡುವೆ ಕಾಳಗ; ಪ್ರವಾಸಿ ಮಹಿಳೆ ಬಲಿ

ಕುಶಾಲನಗರ : Tulu Times l ದುಬಾರೆ ಮುಖ್ಯವಾಗಿ ಆನೆಗಳ ಶಿಬಿರಕ್ಕಾಗಿ ದೇಶದಾದ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಾಕಲ್ಪಡುವ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ನೀಡುವುದು ಹಾಗೂ ಅವುಗಳ ದಿನನಿತ್ಯದ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯುತ್ತಾರೆ. ಈ ಅನುಭವ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ವಿಶೇಷ ಸಂತೋಷವನ್ನು ನೀಡುತ್ತದೆ. ಆದರೆ, ಇದೇ ದುಬಾರೆಯಲ್ಲಿ ಇದೀಗ (ಮೇ.18) ಘೋರ ಘಟನೆಯೊಂದು ನಡೆದಿದೆ.

ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಸಾಕಾನೆಗಳ ನಡುವೆ ನಡೆದ ಕಾಳಗದಲ್ಲಿ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಪ್ರವಾಸ ಬಂದಿದ್ದ ಮಹಿಳೆಯೊಬ್ಬರು ಸಾಕಾನೆಗಳ ಕಾಳಗದ ನಡುವೆ ಸಿಲುಕಿ ಬಲಿಯಾದ ದಾರುಣ ಘಟನೆ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣವಾದ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ. ಚೆನ್ನೈ ಮೂಲದ ಜಿನ್ನು (33) ಎಂಬ ಮಹಿಳೆ ಆನೆಗಳ ನಡುವಿನ ಜಗಳದ ವೇಳೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ದುಬಾರೆ ಶಿಬಿರದಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಶಿಬಿರದ ಸಾಕಾನೆಗಳಾದ ‘ಮಾರ್ತಾಂಡ’ ಮತ್ತು ‘ಕಂಜನ್’ ಎಂಬ ಎರಡು ಆನೆಗಳನ್ನು ನದಿಗೆ ಕರೆತರಲಾಗಿತ್ತು. ಮಾವುತ ಗೌಸ್ ಅವರು ಮಾರ್ತಾಂಡ ಆನೆಯನ್ನು ಸ್ನಾನ ಮಾಡಿಸಲು ನೀರಿಗೆ ಇಳಿಸುತ್ತಿದ್ದರು. ಈ ವೇಳೆ ಮಾರ್ತಾಂಡ ಆನೆಯನ್ನು ನೀರಿಗೆ ಸ್ವಲ್ಪ ಜೋರಾಗಿ ಇಳಿ ಬಿಟ್ಟಾಗ ಅದು ಪಕ್ಕದಲ್ಲಿದ್ದ ಕಂಜನ್ ಆನೆಗೆ ತಗುಲಿದೆ ಎನ್ನಲಾಗಿದೆ. ತನ್ನ ದೇಹಕ್ಕೆ ಮಾರ್ತಾಂಡ ಆನೆ ಸ್ಪರ್ಶಿಸುತ್ತಿದ್ದಂತೆಯೇ ಕಂಜನ್ ಆನೆ ವಿಪರೀತ ಆಕ್ರೋಶಗೊಂಡಿದೆ. ತಕ್ಷಣವೇ ಮಾರ್ತಾಂಡನ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಎರಡು ಬೃಹತ್ ಆನೆಗಳ ನಡುವೆ ಇದ್ದಕ್ಕಿದ್ದಂತೆ ಶುರುವಾದ ಈ ಘರ್ಷಣೆಯಿಂದಾಗಿ ಅಲ್ಲಿದ್ದ ಪ್ರವಾಸಿಗರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ. ಆದರೆ, ದುರದೃಷ್ಟವಶಾತ್ ಪ್ರವಾಸಿ ಮಹಿಳೆ ಜಿನ್ನು ಅವರು ಆನೆಗಳ ಜಗಳದ ರಭಸಕ್ಕೆ ಸಿಲುಕಿದ್ದಾರೆ. ಆನೆಯ ಕಾಲಡಿ ಸಿಲುಕಿದ ಅಥವಾ ದಾಳಿಗೆ ಒಳಗಾದ ಮಹಿಳೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೈಸೂರು ಮತ್ತು ಮಡಿಕೇರಿಯಿಂದ ಸುಲಭವಾಗಿ ತಲುಪಬಹುದಾದ ದುಬಾರೆ, ವಾರಾಂತ್ಯ ಪ್ರವಾಸಕ್ಕೆ ಸೂಕ್ತ ಸ್ಥಳವಾಗಿದೆ. ಪ್ರಕೃತಿ, ವನ್ಯಜೀವಿ ಮತ್ತು ಸಾಹಸವನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಬಯಸುವವರಿಗೆ ದುಬಾರೆ ಮರೆಯಲಾಗದ ಅನುಭವವನ್ನು ನೀಡುತ್ತದೆ. ಆದರೆ ಸುಂದರ ಪ್ರವಾಸವೊಂದು ಹೀಗೆ ಘೋರ ದುರಂತಕ್ಕೆ ಕಾರಣವಾಗಿದ್ದು, ಮೃತರ ಕುಟುಂಬದವರಲ್ಲಿ ಮತ್ತು ಪ್ರವಾಸಿಗರಲ್ಲಿ ಮೌನ ಆವರಿಸುವಂತೆ ಮಾಡಿದೆ.

Kodagu: Fight between livestock at Dubare camp; Tourist woman dies – ತುಳುಟೈಮ್ಸ್

ಇದನ್ನೂ ಓದಿ :ಹೋಟೆಲ್‌ಗಳ ಬಾತ್‌ರೂಮ್ ಗ್ಲಾಸ್ ಯಾವಾಗಲೂ ಮಿನುಗುತ್ತಿರೋದಕ್ಕೆ ಕಾರಣ ಏನು?

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/U2oHThjy010?si=PNkHVBWBCPVHZhtt

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page