ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸ್ಮಾರ್ಟ್ ಟೂರಿಸಂಗೆ ಕರ್ನಾಟಕದ ಹೆಜ್ಜೆ : ‘ನಮ್ಮ ಗೈಡ್’ ಆ್ಯಪ್ ಶೀಘ್ರದಲ್ಲೇ

ಬೆಂಗಳೂರು: Tulu Times l ಕರ್ನಾಟಕದ ಪ್ರವಾಸೋದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ‘ನಮ್ಮ ಗೈಡ್’ ಎಂಬ ಹೊಸ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಈ ಡಿಜಿಟಲ್ ವೇದಿಕೆಯ ಮೂಲಕ ದೇಶಿ ಹಾಗೂ ವಿದೇಶಿ ಪ್ರವಾಸಿಗರು ತಮ್ಮ ಇಷ್ಟದ ಸ್ಥಳೀಯ ಮಾರ್ಗದರ್ಶಕರನ್ನು  ಸುಲಭವಾಗಿ ಸಂಪರ್ಕಿಸಿ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.

ಪ್ರವಾಸಿ ತಾಣಗಳ ಇತಿಹಾಸ, ಸಂಸ್ಕೃತಿ ಹಾಗೂ ಮಹತ್ವದ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಸ್ಥಳೀಯ ಗೈಡ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಇಂತಹ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯುವ ವ್ಯವಸ್ಥೆ ಇಲ್ಲ. ಈ ಕೊರತೆಯನ್ನು ನೀಗಿಸಲು ವಿದೇಶಗಳಲ್ಲಿ ಇರುವ ಮಾದರಿಯಂತೆ ಅತ್ಯಾಧುನಿಕ ಆನ್‌ಲೈನ್ ವೇದಿಕೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.

ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ‘ನಮ್ಮ ಗೈಡ್’ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್ ಮೂಲಕ ಪ್ರವಾಸಿಗರು ತಮಗೆ ಬೇಕಾದ ಸ್ಥಳೀಯ ಗೈಡ್‌ಗಳ ಮಾಹಿತಿ, ಲಭ್ಯತೆ ಹಾಗೂ ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಇದರಿಂದ ಪ್ರವಾಸಿ ತಾಣಗಳ ಬಗ್ಗೆ ಅರ್ಥಪೂರ್ಣ ಮಾಹಿತಿ ದೊರೆಯುವುದರ ಜೊತೆಗೆ ಪ್ರವಾಸದ ಅನುಭವವೂ ಮತ್ತಷ್ಟು ಉತ್ತಮವಾಗಲಿದೆ.

ಈ ಯೋಜನೆಯ ಮತ್ತೊಂದು ಪ್ರಮುಖ ಉದ್ದೇಶವೆಂದರೆ, ಪ್ರವಾಸಿ ತಾಣಗಳ ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆಯಲ್ಲಿ ಗೈಡ್‌ಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು. ಜೊತೆಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ಈಗಾಗಲೇ ನೋಂದಾಯಿತವಾಗಿರುವ ಸ್ಥಳೀಯ ಗೈಡ್‌ಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನೂ ಈ ಯೋಜನೆ ಸೃಷ್ಟಿಸಲಿದೆ.

ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ರಾಜ್ಯದ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಸ್ಟಾರ್ಟ್‌ಅಪ್‌ಗಳಿಂದ ಸಹಭಾಗಿತ್ವಕ್ಕೆ ಆಹ್ವಾನ ನೀಡಲು ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಈ ಕುರಿತು ಮಾತನಾಡಿರುವ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಕರ್ನಾಟಕದ ಪ್ರವಾಸೋದ್ಯಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸ್ಥಳೀಯ ಗೈಡ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ‘ನಮ್ಮ ಗೈಡ್’ ವೆಬ್‌ಸೈಟ್ ಹಾಗೂ ಆ್ಯಪ್ ಮೂಲಕ ಪ್ರವಾಸಿಗರು ಪಾರದರ್ಶಕವಾಗಿ ಮತ್ತು ಸುಲಭವಾಗಿ ಗೈಡ್ ಸೇವೆ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಪ್ರವಾಸಿಗರಿಗೆ ಉತ್ತಮ ಅನುಭವ ಸಿಗುವುದರ ಜೊತೆಗೆ ನಮ್ಮ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳ ಸಂರಕ್ಷಣೆ ಮತ್ತು ಸ್ವಚ್ಛತೆಗೂ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ. ರಾಜ್ಯದ ಪ್ರತಿಭಾವಂತ ಸ್ಟಾರ್ಟ್‌ಅಪ್‌ಗಳಿಗೆ ಈ ನೂತನ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸುವ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

Karnataka’s step towards smart tourism: ‘Namma Guide’ app coming soon – ತುಳುಟೈಮ್ಸ್

ಇದನ್ನೂ ಓದಿ :ಇನ್ನು ಎಐ ಕೈಯಲ್ಲಿ ಸರ್ಕಾರಿ ಸೇವೆಗಳು : ಕೇರಳ ಸರ್ಕಾರದ ಮಹತ್ವದ ನಿರ್ಧಾರ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/BXNKWtQqyvQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page