ಬಂಟ್ವಾಳ : Tulu Times l ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಸಮೀಪ ಬುಧವಾರ ಸಂಜೆ ನಡೆದ ದಾರುಣ ಘಟನೆಯಲ್ಲಿ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಎಲ್‌ಕೆಜಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಮೃತ ಬಾಲಕಿಯನ್ನು ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿ ಚಿರನ್ವಿ (6) ಎಂದು ಗುರುತಿಸಲಾಗಿದೆ. ಈಕೆ ಬಿಳಿಯೂರಿನ ನಿವಾಸಿಗಳಾದ ಚಂದ್ರಶೇಖರ ಮತ್ತು ಅನಿತಾ ದಂಪತಿಯ ಪುತ್ರಿ ಎಂದು ವರದಿಯಾಗಿದೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗಳಿಗೆ ಬಿಡಲು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 24 ಆಸನಗಳ ಮಿನಿ ಬಸ್ ಎಂದಿನಂತೆ ಹೊರಟಿತ್ತು. ಹೆದ್ದಾರಿ ಮೂಲಕ ಮಾಣಿ, ಭರಣಿಕೆರೆ ಮಾರ್ಗವಾಗಿ ಕಲ್ಲೆಟ್ಟಿ ಕಡೆ ಸಾಗುತ್ತಿದ್ದ ವೇಳೆ, ಕೆಲ ಮಕ್ಕಳನ್ನು ಇಳಿಸಿದ ನಂತರ ಬರಿಮಾರು ಗ್ರಾಮದ ಕಲ್ಲೆಟ್ಟಿ ಸಮೀಪದ ಶ್ರೀ ಕಾನಲ್ತಾಯ ದೈವಸ್ಥಾನದ ಬಳಿಯ ಬೃಹತ್ ಮರ ಏಕಾಏಕಿ ಸಂಚರಿಸುತ್ತಿದ್ದ ಬಸ್ ಮೇಲೆ ಉರುಳಿ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಒಳಗಿದ್ದ ಪುಟಾಣಿ ಮಕ್ಕಳು ತೀವ್ರ ಆತಂಕಕ್ಕೆ ಒಳಗಾದರು. ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ಬಸ್‌ನೊಳಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ಸಮೀಪದ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ತೀವ್ರ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಮರ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮೃತ ಬಾಲಕಿಯ ಅಗಲಿಕೆ ಶಾಲಾ ಸಮುದಾಯ ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
Bantwal: LKG girl dies, four children injured after tree falls on school bus – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯದಲ್ಲಿ ಆಟಿಕೂಟ ಸಂಭ್ರಮ: ಭ್ರಷ್ಟಾಚಾರ ನಿರ್ಮೂಲನೆಗೆ ಶಾಸಕಿ ಭಾಗೀರಥಿ ಮುರುಳ್ಯ ಕರೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w











