ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕೃಷ್ಣನ ದರ್ಶನಕ್ಕೆ ಉಡುಪಿಯಲ್ಲಿ ಭಕ್ತ ಸಾಗರ

ಉಡುಪಿ: Tulu Times l ಐತಿಹಾಸಿಕ ಶ್ರೀಕೃಷ್ಣ ಮಠದಲ್ಲಿ ಇಂದು (ಸೆ.04) ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬದ ಸಂಭ್ರಮ ಮನೆಮಾಡಿದೆ. ಪರ್ಯಾಯ ಮಠದ ನೇತೃತ್ವದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಉಡುಪಿಗೆ ಆಗಮಿಸಿದ್ದಾರೆ.

ಜನ್ಮಾಷ್ಟಮಿ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತಿವೆ. ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರಗಳನ್ನು ನೆರವೇರಿಸಲಾಗಿದ್ದು, ಮಠದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೃಷ್ಣನ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಜನ್ಮಾಷ್ಟಮಿಯ ಪ್ರಮುಖ ಆಕರ್ಷಣೆಯಾಗಿರುವ ಮಧ್ಯರಾತ್ರಿಯ ಕೃಷ್ಣಜನ್ಮೋತ್ಸವಕ್ಕಾಗಿ ಮಠದಲ್ಲಿ ವಿಶೇಷ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಧ್ಯರಾತ್ರಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸಿದ ಬಳಿಕ ಭಕ್ತರು ಸಂಪ್ರದಾಯದಂತೆ ಕೃಷ್ಣನಿಗೆ ಅರ್ಥ್ಯ ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಮಂತ್ರಘೋಷ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಉಡುಪಿಯ ರಥಬೀದಿಯಲ್ಲೂ ಹಬ್ಬದ ವಾತಾವರಣ ಮತ್ತಷ್ಟು ರಂಗೇರಿದೆ. ಕರಾವಳಿಯ ಸಾಂಪ್ರದಾಯಿಕ ಕಲೆಗಳಾದ ಹುಲಿವೇಷ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸುತ್ತಿವೆ. ಹುಲಿವೇಷ ತಂಡಗಳ ಕುಣಿತಕ್ಕೆ ಭಕ್ತರು ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಉಡುಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ಮಠದ ಸುತ್ತಮುತ್ತ ಭಾರಿ ಜನಸಂದಣಿ ಕಂಡುಬರುತ್ತಿದೆ. ಭಕ್ತರ ಸುರಕ್ಷತೆ ಹಾಗೂ ಸುಗಮ ದರ್ಶನಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕೃಷ್ಣನ ನಾಮಸ್ಮರಣೆ, ಭಜನೆ, ಸಾಂಪ್ರದಾಯಿಕ ಕಲೆಗಳು ಹಾಗೂ ಧಾರ್ಮಿಕ ಆಚರಣೆಗಳೊಂದಿಗೆ ಉಡುಪಿಯಲ್ಲಿ ಜನ್ಮಾಷ್ಟಮಿ ಹಬ್ಬವು ಭಕ್ತಿ ಮತ್ತು ಸಂಭ್ರಮದ ಸಮ್ಮಿಲನವಾಗಿ ಕಂಗೊಳಿಸುತ್ತಿದೆ. ಮಧ್ಯರಾತ್ರಿಯ ಕೃಷ್ಣಜನ್ಮೋತ್ಸವದ ಬಳಿಕವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.

Devotees throng Udupi for darshan of Lord Krishna –  ತುಳು ಟೈಮ್ಸ್

ಇದನ್ನೂ ಓದಿ :ಸುಳ್ಯ : ಸಿಎ ಬ್ಯಾಂಕ್‌ನಿಂದ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಕಾಳುಮೆಣಸು, ಕಾಫಿ ಗಿಡ ವಿತರಣೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page