ಬೆಂಗಳೂರು : Tulu Times l ಬೆಂಗಳೂರು ಮೂಲದ ದಂಪತಿ ಡ್ಯಾನಿಷ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಭಾರತೀಯ ಮಹಾಸಾಗರದ ಪಾಲ್ಕ್ ಜಲಸಂಧಿಯನ್ನು ಈಜಿ ದಾಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶ್ರೀಲಂಕೆಯಿಂದ ಭಾರತಕ್ಕೆ ಮುಕ್ತ ಸಮುದ್ರದಲ್ಲಿ ಈಜಿದ ಮೊದಲ ಜೋಡಿಯೆಂಬ ಹೆಗ್ಗಳಿಕೆಗೆ ಇವರಿಬ್ಬರೂ ಪಾತ್ರರಾಗಿದ್ದಾರೆ.
ಇವರು ಶ್ರೀಲಂಕಾದ ತಲೈಮನ್ನಾರ್‌ನಿಂದ ಪ್ರಯಾಣ ಆರಂಭಿಸಿ, ಧನುಶ್ ಕೋಡಿವರೆಗೆ ಸುಮಾರು 32 ಕಿಲೋಮೀಟರ್ ದೂರವನ್ನು ನಿರಂತರವಾಗಿ ಈಜುತ್ತಾ 10 ಗಂಟೆ 45 ನಿಮಿಷಗಳಲ್ಲಿ ಸಾಧನೆ ಪೂರ್ಣಗೊಳಿಸಿದರು. ಐತಿಹಾಸಿಕ ರಾಮಸೇತು ಮಾರ್ಗದ ಮೂಲಕ ನಡೆದ ಈ ಸಾಹಸಯಾತ್ರೆ ಅನೇಕರ ಗಮನ ಸೆಳೆಯಿತು.

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಈ ದಂಪತಿ ಹಲವು ತಿಂಗಳುಗಳ ಕಾಲ ಕಠಿಣ ತರಬೇತಿ ಪಡೆದು ಈ ಸವಾಲಿಗೆ ಸಿದ್ಧರಾಗಿದ್ದರು. ಸಮುದ್ರದ ಅಲೆಗಳು, ಪ್ರಬಲ ಪ್ರವಾಹ ಮತ್ತು ಬದಲಾಗುವ ಹವಾಮಾನ ಪರಿಸ್ಥಿತಿಗಳ ನಡುವೆಯೂ ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾದರು. ಈ ಸಾಹಸಕ್ಕೆ ವೈದ್ಯಕೀಯ ತಂಡ, ಕರಾವಳಿ ರಕ್ಷಣಾ ಪಡೆ ಹಾಗೂ ಭದ್ರತಾ ದೋಣಿಗಳಿಂದ ಸಂಪೂರ್ಣ ಸಹಕಾರ ನೀಡಲಾಗಿತ್ತು. ಪ್ರಯಾಣದ ವೇಳೆ ಯಾವುದೇ ವಿರಾಮವಿಲ್ಲದೆ ಇಬ್ಬರೂ ಸಮುದ್ರವನ್ನು ದಾಟಿರುವುದು ವಿಶೇಷವಾಗಿದೆ.
ಈ ದಂಪತಿಗಳಿಬ್ಬರೂ ಸಾಫ್ಟ್‌ವೇರ್ ವೃತ್ತಿಪರರಾಗಿದ್ದು, ಅವರು ನಾಲ್ಕು ವರ್ಷಗಳ ಹಿಂದೆ ಈಜು ತರಬೇತಿಯನ್ನು ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ.
ಸಾಧನೆಯ ಬಳಿಕ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ದಂಪತಿ, ನಾವು ಸಾಧಿಸಿದ್ದೇವೆ. ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆ 45 ನಿಮಿಷಗಳಲ್ಲಿ ಈಜಿ ತಲುಪಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಇವರ ಸಾಹಸ, ಧೈರ್ಯ ಮತ್ತು ಸಮನ್ವಯವನ್ನು ಕೊಂಡಾಡಿದ್ದಾರೆ. ಈ ಸಾಧನೆ ಕೇವಲ ದೈಹಿಕ ಸಾಮರ್ಥ್ಯದ ಸಂಕೇತವಾಗಿಯೇ ಅಲ್ಲದೆ ಭಾರತ-ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೂ ಪ್ರತೀಕವಾಗಿದೆ.
Couple makes history by swimming 32 km in the ocean – ತುಳುಟೈಮ್ಸ್
ಇದನ್ನೂ ಓದಿ :ನೀಟ್ ಯುಜಿ 2026 ಪರೀಕ್ಷೆ ರದ್ದು, ಸಿಬಿಐ ತನಿಖೆಗೆ ಆದೇಶ : ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=sG3oo81oA_gg4BvG











