ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಜಲ ನಿರ್ವಹಣೆಗೆ ಇಸ್ರೋ ಜತೆ ಕೇಂದ್ರದ ಮಹತ್ವದ ಒಪ್ಪಂದ; ಹೊಸ ಜಲ ಸಂಶೋಧನಾ ಯೋಜನೆಗಳ ಘೋಷಣೆ

ನವದೆಹಲಿ: Tulu Times l ದೇಶದ ಜಲ ಸಂಪನ್ಮೂಲಗಳ ಸಮರ್ಥ ನಿರ್ವಹಣೆಗೆ ಉಪಗ್ರಹ ತಂತ್ರಜ್ಞಾನವನ್ನು ಬಳಸುವ ಉದ್ದೇಶದಿಂದ ಕೇಂದ್ರದ ಜಲ ಶಕ್ತಿ ಸಚಿವಾಲಯ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೋಮವಾರ ಮಹತ್ವದ ಒಪ್ಪಂದ ಪತ್ರಕ್ಕೆ ಸಹಿ ಹಾಕಿವೆ. ನವದೆಹಲಿಯಲ್ಲಿರುವ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್ ನಲ್ಲಿ ನಡೆದ ಜಲ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಒಪ್ಪಂದದಡಿ ಜಲ ಸಂಪನ್ಮೂಲ ಇಲಾಖೆ ಮತ್ತು ಇಸ್ರೋ ಒಟ್ಟಾಗಿ 24 ಪ್ರಮುಖ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿವೆ. ಅವುಗಳಲ್ಲಿ: ಜಲಾಶಯಗಳ ಮೇಲ್ವಿಚಾರಣೆ, ನೀರಿನ ವ್ಯಾಪ್ತಿ ಮೌಲ್ಯಮಾಪ, ನದಿಗಳ ಹರಿವಿನ ವಿಶ್ಲೇಷಣ, ಉಪಗ್ರಹ ಆಧಾರಿತ ನೀರಿನ ಗುಣಮಟ್ಟ ಪರಿಶೀಲನೆ, ಜಲಮೂಲಗಳಲ್ಲಿ ಮ್ಯಾಕ್ರೋಪ್ಲಾಸ್ಟಿಕ್ ತ್ಯಾಜ್ಯದ ಅಧ್ಯಯನ, ಭೂಗರ್ಭ ಜಲ ಮೌಲ್ಯಮಾಪನ, ಪ್ರವಾಹ ಮುನ್ಸೂಚನೆ ಮತ್ತು ಜಲ ಸಂಪನ್ಮೂಲಗಳ ಮೇಲ್ವಿಚಾರಣೆ ಮುಂತಾದ ವಿಷಯಗಳು ಸೇರಿವೆ.

ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್, ವಿಕಸಿತ ಭಾರತ 2047ರ ಗುರಿ ಸಾಧನೆಗೆ ಜಲ ಭದ್ರತೆ ಅತ್ಯಂತ ಪ್ರಮುಖ ಅಡಿಪಾಯವಾಗಿದೆ ಎಂದು ಹೇಳಿದರು. ಜಲ ಸಮಸ್ಯೆಗಳಿಗೆ ತಂತ್ರಜ್ಞಾನ, ನವೀನತೆ, ಸಾಂಪ್ರದಾಯಿಕ ಜ್ಞಾನ ಹಾಗೂ ಜನರ ಭಾಗವಹಿಸುವಿಕೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ವಿ. ನಾರಾಯಣನ್ ಮಾತನಾಡಿ, ಈ ಒಪ್ಪಂದವು ಜಲ ನಿರ್ವಹಣೆಯಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನದ ಬಳಕೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದರು. ಇಂದು ಬಾಹ್ಯಾಕಾಶ ತಂತ್ರಜ್ಞಾನವು ಜಲ ಸಂಪನ್ಮೂಲಗಳನ್ನು ವೀಕ್ಷಿಸಲು, ಮೌಲ್ಯಮಾಪನ ಮಾಡಲು, ಮುನ್ಸೂಚನೆ ನೀಡಲು ಹಾಗೂ ನಿರ್ವಹಿಸಲು ಅಭೂತಪೂರ್ವ ಸಾಮರ್ಥ್ಯವನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ANRF ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಕಲ್ಯಾಣರಮನ್ ಮಾತನಾಡಿ, ಮಹಾಜಲ ಯೋಜನೆಯಡಿ ವಿಶ್ವವಿದ್ಯಾಲಯಗಳು, ಸಂಶೋಧನಾ ಪ್ರಯೋಗಾಲಯಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಉನ್ನತ ಮಟ್ಟದ ಸಂಶೋಧನಾ ಯೋಜನೆಗಳಿಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.‌ ಈ ಒಪ್ಪಂದದ ಮೂಲಕ ಜಲ ಸಂಪನ್ಮೂಲಗಳ ಸಂರಕ್ಷಣೆ, ನಿರ್ವಹಣೆ ಮತ್ತು ಭವಿಷ್ಯದ ನೀರಿನ ಸವಾಲುಗಳನ್ನು ಎದುರಿಸಲು ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : ನೀಟ್-ಯುಜಿ ಮರುಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತವಾಗಿ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಣೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/YZbFFQ3xewU?si=C86R37A1a09Ro8_S

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 179

You cannot copy content of this page