ಕಲ್ಬುರ್ಗಿ : Tulu Times l ಹೆಡ್‌ಲೈಟ್ ದೋಷಗೊಂಡಿದ್ದರೂ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಕೆಕೆಆರ್‌ಟಿಸಿ ಬಸ್ ಚಲಾಯಿಸಿದ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಾರಿಗೆ ನಿಗಮ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಕ ಎಸ್.ಜಿ. ಗಂಗಾಧರ್ ನೀಡಿರುವ ಮಾಹಿತಿಯ ಪ್ರಕಾರ, ಕೆಎ-28 ಎಫ್-1985 ನೋಂದಣಿ ಸಂಖ್ಯೆಯ ಚಿಂಚೋಳಿ ಡಿಪೋಗೆ ಸೇರಿದ ಬಸ್ ತನ್ನ ಕೊನೆಯ ರಾತ್ರಿ ಸಂಚಾರದಲ್ಲಿದ್ದಾಗ ಹೆಡ್‌ಲೈಟ್ ಬೆಳಕು ಮಂದವಾಗಿತ್ತು. ಆದರೂ ಬಸ್‌ನ್ನು ನಿಲ್ಲಿಸದೆ, ಮೊಬೈಲ್ ಫೋನ್ ಟಾರ್ಚ್‌ನ ಬೆಳಕನ್ನು ಬಳಸಿಕೊಂಡು ಚಾಲಕ ಪ್ರಯಾಣ ಮುಂದುವರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳು ಚಿಂಚೋಳಿ ಡಿಪೋದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ವರದಿಯ ಆಧಾರದ ಮೇಲೆ ಕರ್ತವ್ಯ ಲೋಪದ ಆರೋಪದಲ್ಲಿ ಮೂವರು ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಬಸ್‌ನ ದೋಷವನ್ನು ಸಮರ್ಪಕವಾಗಿ ಸರಿಪಡಿಸದ ಆರೋಪದ ಮೇಲೆ ತಾಂತ್ರಿಕ ಸಿಬ್ಬಂದಿ ಶಿವಾನಂದ, ನಿರ್ವಹಣಾ ಕಾರ್ಯದ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ತಾಂತ್ರಿಕ ಮೇಲ್ವಿಚಾರಕ ಬಸವರಾಜ್, ಹಾಗೂ ಹೆಡ್‌ಲೈಟ್ ದೋಷ ಸರಿಪಡಿಸದೆ ವಾಹನ ಚಲಾಯಿಸಿದ ಆರೋಪದ ಮೇಲೆ ಚಾಲಕ ಆಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯದ ಎಲ್ಲಾ ಡಿಪೋಗಳ ವ್ಯವಸ್ಥಾಪಕರು ಹಾಗೂ ತಾಂತ್ರಿಕ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ವಾಹನಗಳಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದರೆ ಅದನ್ನು ಸಂಪೂರ್ಣವಾಗಿ ಸರಿಪಡಿಸಿದ ಬಳಿಕವೇ ರಸ್ತೆಗಿಳಿಸಬೇಕು ಎಂದು ನಿಗಮ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಈ ಘಟನೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ವಾಹನಗಳ ಸಮರ್ಪಕ ನಿರ್ವಹಣೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.
Bus driven using mobile torchlight: Three, including the driver, suspended. – ತುಳು ಟೈಮ್ಸ್
ಇದನ್ನೂ ಓದಿ : ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಬಳಿಕ ಡೇ ಕೇರ್ ಕೇಂದ್ರಗಳ ಮೇಲೆ ಸರ್ಕಾರದ ಕಣ್ಗಾವಲು
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/zL6G6JE_ZwA











