ಪುತ್ತೂರು:ತುಳುಟೈಮ್ಸ್:ಶ್ರೀ ಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನವು ಕಳೆದ ಐದು ದಶಕಗಳಿಂದ ವಿವಿಧ ರೀತಿಯಲ್ಲಿ ಯಕ್ಷಕಲಾ ಸೇವೆಯನ್ನು ಮಾಡಿರುವುದು ಅಪೂರ್ವ ವಾಗಿದ್ದು ಶತಮಾನೋತ್ಸವದತ್ತ ಒಯ್ಯುವುದಕ್ಕೆಶ್ರಮಿಸಿದರೆ ಉಪ್ಪಿನಂಗಡಿಯ ಸಂಘವು ಒಂದು ಆದರ್ಶವಾಗುತ್ತದೆಯೆಂದು ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದರು.
ಸಂಗಮ ಕೃಪಾ ಸಭಾಭವನದಲ್ಲಿ ಜರಗಿದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಯಕ್ಷಗಾನದ ಸಮಗ್ರ ಬೆಳವಣಿಗೆಗೆ ಸಂಘಗಳ ಕೊಡುಗೆ ಅಪಾರವಾಗಿದ್ದು ಆ ಮೂಲಕ ಅನೇಕ ಕಲಾವಿದರು ಬೆಳಕಿಗೆ ಬಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂಘದ ಅಸ್ತಿತ್ವಕ್ಕೆ ದುಡಿದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅಗತ್ಯವೆಂದರು.
ತಾಳಮದ್ದಳೆ ಪ್ರತಿಯೊಬ್ಬರ ಚಿಂತನೆಗೆ ಜೀವ ಕೊಡುವ ಕಲಾ ಮಾಧ್ಯಮ. ಮಾತುಗಾರಿಕೆ, ವಾದ, ಪ್ರತಿವಾದ, ಜಿಜ್ಞಾಸೆ ಮತ್ತು ತರ್ಕದಿಂದ ಉಂಟಾದ ಜ್ಞಾನದ ಸಂಗ್ರಹವು ಅರ್ಥಧಾರಿ ಮತ್ತು ಕೇಳುಗರನ್ನು ಬೆಳೆಸುತ್ತದೆ. ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಈ ಗುಣಗಳು ಯಶಸ್ಸನ್ನು ಪಡೆಯಲು ಅನುಕೂಲಿಸುತ್ತದೆಯೆಂದರು.
ಕಲಾವಿದ, ಕಲಾ ಪೋಷಕರ ಸನ್ಮಾನ
ಯಕ್ಷ ಸಂಘಟಕ ಬಿ. ಭುಜಬಲಿ ಧರ್ಮಸ್ಥಳ ಇವರಿಗೆ ಉತ್ತಮ ಸಂಘಟಕ ಪ್ರಶಸ್ತಿ, ಉಮೇಶ ಶೆಣೈ ರಾಮನಗರ, ಸುರೇಶ ಪುತ್ತೂರಾಯ ಇವರಿಗೆ ಉತ್ತಮ ಕಲಾಪೋಷಕ ಪ್ರಶಸ್ತಿ, ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘಕ್ಕೆಉತ್ತಮ ಯಕ್ಷಕಲಾ ಸಂಘ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರಿಗೆ ಪ್ರದಾನಿಸಲಾಯಿತು. ಕಲಾವಿದ ಲೇಖಕ ನಾ. ಕಾರಂತ ಪೆರಾಜೆ ಇವರಿಗೆ ಯಕ್ಷಾಕ್ಷರ ಪ್ರಶಸ್ತಿ, ಯಕ್ಷಗಾನ ಡಿಪ್ಲೋಮೋ ಪದವಿ ಪಡೆದ ಕಲಾವಿದೆ ಶ್ರುತಿ ಬಲ್ನಾಡು ಇವರಿಗೆ ಬಹುಮುಖ ಪ್ರತಿಭೆಯ ಪ್ರಶಸ್ತಿ, ಸ್ಥಾಪಕ ಸದಸ್ಯ ದುಗ್ಗಪ್ಪ ಗೌಡ ಅವರನ್ನು ಗೌರವಿಸಲಾಯಿತು .
ಪ್ರಭಾಕರ ಜೋಶಿ ಅವರಿಗೆ ಸ್ವರ್ಣಸ್ಮೃತಿ ಗೌರವ :
ಕಳೆದ ನಾಲ್ಕು ದಶಕಗಳಿಂದ ಉಪ್ಪಿನಂಗಡಿಯ ಕಾಳಿಕಾಂಬಾ ಯಕ್ಷಗಾನ ಸಂಘದೊಂದಿಗೆ ಒಡನಾಟವಿರುವ ಡಾ. ಯಂ ಪ್ರಭಾಕರ ಜೋಶಿ ಅವರಿಗೆ ಸುವರ್ಣ ಮಹೋತ್ಸವದ ಸ್ಮೃತಿ ಗೌರವ ಪ್ರಶಸ್ತಿ ಪ್ರದಾನಿಸಲಾಯಿತು..
ಒಳ್ಳೆಯ ಅರ್ಥದಾರಿಯಾಗಲು ಸಂಘದ ಸಂಪರ್ಕ ಬೇಕು. ಮಹಿಳೆಯರು ತಾಳಮದ್ದಳೆಯಲ್ಲಿ ಭಾಗವಹಿಸಲು ಈಗ ಹೆಚ್ಚು ಅನುಕೂಲಗಳಿವೆ.ಪ್ರತಿಭಾವಂತರೂ ಇದ್ದಾರೆ.
ಕರಾವಳಿಯ ಯಕ್ಷಗಾನಕ್ಕೆ ಪ್ರತ್ಯೇಕವಾದ ಪ್ರಾಧಿಕಾರ ರಚನೆಯಾಗಬೇಕು. ಉತ್ತಮ ಕಲಾವಿದರಾಗುವ ಪ್ರತಿಭಾನ್ವಿತರಿದ್ದರೂ ಅವರಿಗೆ ಸೂಕ್ತ ಅವಕಾಶಗಳ ಕೊರತೆ ಇದೆ. ಹಿರಿಯ ಕಲಾವಿದರಿಗೆ ಹೋಲಿಸಿದರೆ ನಾವು ಮಾಡಿದ್ದು ಕಡಿಮೆ ಎಂದಣಿಸುತ್ತದೆ.
ಯಕ್ಷಗಾನ ಸಂಘಗಳಿಗೂ ದೊಡ್ಡ ಗೌರವ ಪ್ರಾಪ್ತಿಯಾಗಬೇಕು. ಸ್ವರ್ಣ ಸ್ಮೃತಿ ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದೇನೆ. ಸಂಘವು ನಡೆಸುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಈಗಾಗಲೇ 130 ತಾಳಮದ್ದಳೆಯ ಐತಿಹಾಸಿಕ ದಾಖಲೆ ಮಾಡಿದ್ದು ಮುಂದಿನ ಐದು ತಾಳಮದ್ದಳೆಗಳಿಗೆ ಸದಸ್ಯರೊಂದಿಗೆ ತಾನು ಭಾಗವಹಿಸುವುದಾಗಿ ತಿಳಿಸಿದರು.
ಬಾಲ ಕಲಾವಿದ ಸುಶಾಂತ ರಾವ್ ಮತ್ತು ಸಂಸ್ಕೃತದಲ್ಲಿ ಎಂಎ ಪದವಿ ಪಡೆದ ಶಿಕ್ಷಕಿ, -ಅರ್ಥಧಾರಿ ಪುಷ್ಪಾ ತಿಲಕ್ ಅವರನ್ನು ಗೌರವಿಸಲಾಯಿತು.
ರಸಪ್ರಶ್ನೆ ವಿಜೇತರಿಗೆ ಪುರಸ್ಕಾರ:
ಶ್ರೀ ಮಹಾಭಾರತ ಸರಣಿಯ ರಸಪ್ರಶ್ನೆಯಲ್ಲಿ ವಿಜೇತರಾದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಮತ್ತು ಶ್ರೀರಾಮ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸ್ವರ್ಣ ಕಾಯಕ ಸ್ಮರಣ ಸಂಚಿಕೆ ಬಿಡುಗಡೆ :
ಪುತ್ತೂರಿನ ನಿಕಟಪೂರ್ವ ಶಾಸಕರಾದ ಸಂಜೀವ ಮಟoದೂರು ಸ್ವರ್ಣ ಕಾಯಕ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಬಹಳ ಕಷ್ಟಕಾಲದಲ್ಲಿ ಯಕ್ಷಗಾನ ಕಲಾವಿದರು ಕಲೆಯನ್ನು ಬೆಳೆಸಿದ್ದಾರೆ. ಶಿಕ್ಷಣ ಕಡಿಮೆ ಇದ್ದರೂ ಅವರ ಕಲಾ ಪ್ರೌಢಿಮೆ ಇಂದಿಗೂ ಜನಮಾನಸದಲ್ಲಿದೆ. ಉಪ್ಪಿನಂಗಡಿ ಪರಿಸರವು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಳಿಕೆ ರಾಮಯ್ಯ ರೈ, ಪಾತಾಳ ವೆಂಕಟರಮಣ ಭಟ್ ಮೊದಲಾದ ಪ್ರತಿಭೆಗಳನ್ನು ಯಕ್ಷರಂಗಕ್ಕೆ ನೀಡಿದೆ.ಈ ಪರಂಪರೆಯು. ಮುಂದುವರಿಯಲಿ. ಕಲಾವಿದರನ್ನು ಸೃಷ್ಟಿಸುವಲ್ಲಿ ಶ್ರೀ ಕಾಳಿಕಾಂಬ ಯಕ್ಷಕಲಾ ಸಂಘವು ಮಾಡುತ್ತಿರುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಉಪ್ಪಿನಂಗಡಿಯು ಸಂಗಮ ಕ್ಷೇತ್ರವಾಗಿ ಪ್ರಸಿದ್ಧಿಯನ್ನು ಪಡೆದದ್ದಲ್ಲದೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಯಕ್ಷಗಾನ ವಿದ್ವಾಂಸ ಡಾ.ಸೀಮಂತೂರು ನಾರಾಯಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದ. ಕ ಜಿಲ್ಲಾ ಸಾಹಿತ್ಯ ಸಮ್ಮೇಳನವು ಉಪ್ಪಿನಂಗಡಿಯಲ್ಲಿ ನಡೆದಿದ್ದು ಯಕ್ಷಗಾನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕವು ಮನ್ನಣೆಯನ್ನು ನೀಡಿದೆ.
ಯಕ್ಷಗಾನವು ನಮ್ಮ ಬದುಕನ್ನು ರೂಪಿಸುವ ಶಕ್ತಿಯನ್ನು ಹೊಂದಿದೆ.. ಶುದ್ಧ ಕನ್ನಡ ಭಾಷೆ,ಮಾತನಾಡುವ ಶೈಲಿಯನ್ನು ಕಾರ್ಯಕ್ರಮ ನಿರೂಪಿಸುವ ದೂರದರ್ಶನ ಮತ್ತು ವಿವಿಧ ಚಾನೆಲ್ ನಿರೂಪಕರು ಯಕ್ಷಗಾನ ಸಮಾರಂಭವನ್ನು ನೋಡಿ ಕಲಿಯಬೇಕಾಗಿದೆ. ಮಂಗಳೂರಿನ ಶ್ರೀ ವಾಗೀಶ್ವರಿ ಯಕ್ಷಗಾನ ಸಂಘವು 104 ವರ್ಷಗಳಿಂದ ನಡೆಯುತ್ತಿದ್ದು ಶ್ರೀಕಾಳಿಕಾಂಬ ಯಕ್ಷಕಲಾ ಪ್ರತಿಷ್ಠಾನವು ಇದೇ ರೀತಿ ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದರು.
ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ ಡಾ. ಹರೀಶ್ ಆಚಾರ್ ಮಾತನಾಡಿ ಕರಾವಳಿ ಕರ್ನಾಟಕದ ಜನರ ಬದುಕಿನ ಭಾಗವಾಗಿ ಬೌದ್ಧಿಕ, ಮತ್ತು ನೈತಿಕ ಮೌಲ್ಯಗಳನ್ನು ವರ್ಧಿಸುವ ಕಲೆ ಯಕ್ಷಗಾನವಾಗಿದ್ದು ಭಾರತೀಯ ರಂಗಭೂಮಿಯ ವಿಶಿಷ್ಟ ಕಲಾಪ್ರಕಾರವು ಎಲ್ಲರಿಗೂ ಶುಭವನ್ನುಂಟು ಮಾಡಲಿಯೆಂದರು.
ಪ್ರತಿಷ್ಠಾನದ ಅಧ್ಯಕ್ಷರಿಗೆ ಗೌರವಾರ್ಪಣೆ :
ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಬಹುದಿನಗಳ ಕನಸನ್ನು ಪ್ರತಿಷ್ಠಾನ ಮತ್ತು ಸಮಿತಿಯ ಪದಾಧಿಕಾರಿಗಳೊಂದಿಗೆ ಸಾಕಾರಗೊಳಿಸಿದ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಚಾರ್ಯ ಗೇರುಕಟ್ಟೆ, ಪತ್ನಿ ಭಾರತಿ ಯಂ. ಯಲ್ ಇವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಮಾತನಾಡಿ ತಾಳಮದ್ದಳೆಯನ್ನು ಕೇಳುವುದರಿಂದ ಸಿಗುವ ಪೌರಾಣಿಕ ಜ್ಞಾನ ಅಪೂರ್ವವಾಗಿದೆ.ಉಪ್ಪಿನಂಗಡಿ ಯಕ್ಷಗಾನ ಸಂಘದ ಕಲಾವಿದರು ಈ ಕಲೆಯನ್ನು ಗ್ರಾಮೀಣ ಪರಿಸರದಲ್ಲಿ ಇಂದಿಗೂ ಉಳಿಸಿಕೊಂಡಿರುವುದು ದೊಡ್ಡ ಸಾಧನೆ. ಜೀವನದಲ್ಲಿ ಹಲವು ಆಕಸ್ಮಿಕ ಯೋಗವನ್ನು ಪಡೆದಿದ್ದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷನಾಗಿ ಯಕ್ಷಗಾನದ ಘನ ವಿದ್ವಾಂಸರ ಸಮ್ಮುಖದಲ್ಲಿ ಉಪಸ್ಥಿತನಾಗಿರುವುದು ಜೀವನದಲ್ಲಿ ಮರೆಯಲಾಗದುಯೆಂದು ತಿಳಿಸಿದರು.
.
ಪ್ರದೀಪ ಚಾರ, ದಿವಾಕರ ಆಚಾರ್ಯ ಹಳೆನೇರೆಂಕಿ,ಕೆ. ಶ್ರೀಧರ ಭಟ್,ಪದ್ಮನಾಭ ಕುಲಾಲ್ ಪುಷ್ಪಾ ತಿಲಕ್, ರವೀಂದ್ರ ದರ್ಬೆ , ಶ್ರೀಧರ ಎಸ್ ಪಿ ಕೃಷ್ಣಾಪುರ,ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಸನ್ಮಾನ ಪತ್ರ ವಾಚಿಸಿದರು.
ಶ್ರೀ ಕಾಳಿಕಾಂಬಾ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ರವೀಂದ್ರ ದರ್ಬೆ ಮತ್ತು ಸಂಘಟನಾ ಕಾರ್ಯದರ್ಶಿ ಗೀತಾ ಕೆ. ಎ ಕಾರ್ಯಕ್ರಮ ನಿರೂಪಿಸಿದರು ಕಲಾವಿದ ಗುಡ್ಡಪ್ಪ ಗೌಡ ಬಲ್ಯ ವಂದಿಸಿದರು.
Uppinangadi Sri Kalikamba Yakshakala Pratishthana Golden Jubilee Celebration Programme tulutimes
ಅರಶಿಣಕ್ಕೆ ಸಾವಿರ ಗುಣಗಳಿದ್ದರೂ ಇದರ ಅತಿಯಾದ ಸೇವನೆ ಅಪಾಯಕಾರಿ
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ https://www.youtube.com/@tulutimess











