ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತಂದೆಯ ಮೊಬೈಲ್‌ಗೆ ಬಂದ ಒಟಿಪಿಯಿಂದ ಬಯಲಾಯ್ತು 8 ತಿಂಗಳ ರಹಸ್ಯ

ಬೆಂಗಳೂರು : Tulu Times l ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ 19 ವರ್ಷದ ತನಿಷ್ಕಾ ಅವರನ್ನು ಸುಮಾರು ಎಂಟು ತಿಂಗಳ ಬಳಿಕ ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದ ಮೊಬೈಲ್‌ ನಂಬರ್‌ ಬದಲಾವಣೆಯ ಸಂದರ್ಭದಲ್ಲಿ ಬಂದ ಒಟಿಪಿ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ತನಿಷ್ಕಾ ಹಾಗೂ ಅವರ ಸ್ನೇಹಿತೆ ತೇಜಸ್ವಿನಿ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ತನಿಖೆಯ ವೇಳೆ ಇಬ್ಬರೂ ಮಹದೇಶ್ವರ ಬೆಟ್ಟದ ಪ್ರದೇಶಕ್ಕೆ ತೆರಳಿ, ಅಲ್ಲಿ ಕೆಲವು ದಿನಗಳ ಕಾಲ ಸಂಚರಿಸಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ನಾಗಮಲೆ ಬೆಟ್ಟದ ಬಳಿ ಇಬ್ಬರು ಸಂಕಷ್ಟದಲ್ಲಿದ್ದಾಗ ಚಾರಣಕ್ಕೆ ತೆರಳಿದ್ದ ಯುವಕರ ಗುಂಪೊಂದು ಅವರನ್ನು ಗಮನಿಸಿ ನೆರವು ನೀಡಿತ್ತು ಎನ್ನಲಾಗಿದೆ. ನಂತರ ಇಬ್ಬರು ಸ್ನೇಹಿತೆಯರು ಪರಸ್ಪರ ಭಿನ್ನಾಭಿಪ್ರಾಯದಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು ಎಂದು ವರದಿಯಾಗಿದೆ. ತೇಜಸ್ವಿನಿ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿರುವ ಅಂಗಡಿಯೊಂದರಲ್ಲಿ ಉಳಿದುಕೊಂಡಿದ್ದರೆ, ತನಿಷ್ಕಾ ಕನಕಪುರ ಮೂಲದ ಯುವಕನೊಬ್ಬನೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದರು ಎನ್ನಲಾಗಿದೆ.

ಈ ಅವಧಿಯಲ್ಲಿ ಯುವಕ ಮತ್ತು ತನಿಷ್ಕಾ ನಡುವೆ ಪ್ರೀತಿ ಬೆಳೆದಿದ್ದು, ಬಳಿಕ ಆತನ ಕುಟುಂಬದವರು ದೇವಸ್ಥಾನದಲ್ಲಿ ಅವರ ವಿವಾಹ ನೆರವೇರಿಸಿದ್ದರು ಎಂದು ತಿಳಿದುಬಂದಿದೆ. ತನಿಷ್ಕಾ ಕಳೆದ ಏಳು ತಿಂಗಳಿಂದ ಕನಕಪುರದ ಗ್ರಾಮವೊಂದರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದ್ದು, ಅವರು ಆರು ತಿಂಗಳ ಗರ್ಭಿಣಿಯಾಗಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

ಪ್ರಕರಣಕ್ಕೆ ಪ್ರಮುಖ ಸುಳಿವು ದೊರೆತದ್ದು ಆಧಾರ್‌ ಚಟುವಟಿಕೆಯಿಂದ. ಸುಮಾರು ಎರಡು ತಿಂಗಳ ಹಿಂದೆ ತನಿಷ್ಕಾ ಅವರ ಆಧಾರ್‌ಗೆ ಲಿಂಕ್‌ ಆಗಿದ್ದ ಮೊಬೈಲ್‌ ನಂಬರ್‌ ಬದಲಾಯಿಸಲು ಪ್ರಯತ್ನ ನಡೆದಿತ್ತು. ಆಧಾರ್‌ನಲ್ಲಿ ನೋಂದಾಯಿಸಿದ್ದ ನಂಬರ್‌ ಅವರ ತಂದೆಯದ್ದಾಗಿತ್ತು. ಬದಲಾವಣೆಯ ಸಂದರ್ಭದಲ್ಲಿ ಒಟಿಪಿ ತಂದೆಯ ಮೊಬೈಲ್‌ಗೆ ಬಂದಿದ್ದು, ಈ ಮೂಲಕ ತನಿಖಾಧಿಕಾರಿಗಳಿಗೆ ಸುಳಿವು ಸಿಕ್ಕಿದೆ.

ಆಧಾರ್‌ ಕೇಂದ್ರದಲ್ಲಿ ತಂದೆಯ ನಂಬರ್‌ ಬದಲಿಗೆ ಯುವಕನ ನಂಬರ್‌ ನೋಂದಾಯಿಸಲು ಪ್ರಯತ್ನ ನಡೆದಿರುವುದನ್ನು ಅಧಿಕಾರಿಗಳು ಸಿಐಡಿಗೆ ತಿಳಿಸಿದ್ದಾರೆ. ಬಳಿಕ ಸಿಐಡಿ ತಂಡ ಕನಕಪುರಕ್ಕೆ ತೆರಳಿ, ಗ್ರಾಮದಲ್ಲಿ ಶೋಧ ನಡೆಸಿ ತನಿಷ್ಕಾ ಅವರನ್ನು ಪತ್ತೆಹಚ್ಚಿದೆ. ಆದರೆ, ತನಿಷ್ಕಾ ಇನ್ನೂ ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಸಮ್ಮತಿಸಿಲ್ಲ ಎನ್ನಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ನಾಪತ್ತೆಯಾದ ಅವಧಿಯಲ್ಲಿನ ಘಟನೆಗಳು, ತನಿಷ್ಕಾ ಅವರ ಚಲನವಲನಗಳು ಹಾಗೂ ತೇಜಸ್ವಿನಿ ಅವರ ಸುಳಿವು ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಕುಟುಂಬಸ್ಥರು ಆರಂಭಿಕ ತನಿಖೆಯಲ್ಲಿ ನಿರ್ಲಕ್ಷ್ಯವಾಗಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ಅಂಶವನ್ನೂ ಪರಿಶೀಲಿಸಲಾಗುತ್ತಿದೆ.

An 8-month-old secret was revealed by an OTP received on the father’s mobile phone – ತುಳುಟೈಮ್ಸ್

ಇದನ್ನೂ ಓದಿ :ಅರಣ್ಯ ಇಲಾಖೆ ಸಿಬ್ಬಂದಿಗೆ ಗುಡ್‌ನ್ಯೂಸ್: ಭತ್ಯೆ ಹೆಚ್ಚಳಕ್ಕೆ ಸರ್ಕಾರದ ಭರವಸೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtube.com/shorts/GzXRNLIiLws?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 221

You cannot copy content of this page