ಕರ್ನಾಟಕ : Tulu Times l ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮತ್ತು ಇಕೋ-ಟ್ರೇಲ್ ಚಟುವಟಿಕೆಗಳನ್ನು ಹೆಚ್ಚು ಸುರಕ್ಷಿತ ಹಾಗೂ ವ್ಯವಸ್ಥಿತಗೊಳಿಸಲು ಅರಣ್ಯ ಇಲಾಖೆ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತಂದಿದೆ. ರಾಜ್ಯದ 39 ಪ್ರಮುಖ ಟ್ರೆಕ್ಕಿಂಗ್ ಮಾರ್ಗಗಳಿಗೆ ಈ ಹೊಸ ಸುರಕ್ಷತಾ ನಿಯಮಗಳು ಅನ್ವಯವಾಗಲಿವೆ.
ಹೊಸ ನಿಯಮದಂತೆ ಪ್ರತಿಯೊಂದು ಟ್ರೆಕ್ಕಿಂಗ್ ಮಾರ್ಗವನ್ನು ಪ್ರವಾಸಿಗರಿಗೆ ತೆರೆಯುವ ಮೊದಲು ಸುರಕ್ಷತಾ ಪರಿಶೀಲನೆ ನಡೆಸಲಾಗುತ್ತದೆ. ಅಲ್ಲದೆ, ಪ್ರತಿ ಮಾರ್ಗದ ಸಾಮರ್ಥ್ಯವನ್ನು ಆಧರಿಸಿ ದಿನಕ್ಕೆ ಎಷ್ಟು ಮಂದಿ ಟ್ರೆಕ್ಕರ್ಗಳಿಗೆ ಪ್ರವೇಶ ನೀಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇದರಿಂದ ಅತಿಯಾದ ಜನಸಂದಣಿ ನಿಯಂತ್ರಿಸುವುದರ ಜೊತೆಗೆ ಅರಣ್ಯ ಸಿಬ್ಬಂದಿಗೆ ಪ್ರವಾಸಿಗರ ಮೇಲೆ ನಿಗಾ ಇಡುವುದು ಸುಲಭವಾಗಲಿದೆ.
ಮೂಲ ಸೌಲಭ್ಯಗಳನ್ನು ಕಲ್ಪಿಸಲು ಇಲಾಖೆ ಮುಂದಾಗಿದೆ ;
ಟ್ರೆಕ್ಕಿಂಗ್ ತಂಡಗಳೊಂದಿಗೆ ತರಬೇತಿ ಪಡೆದ ಸ್ಥಳೀಯ ಪ್ರಕೃತಿ ಮಾರ್ಗದರ್ಶಕರು ಇರಲಿದ್ದಾರೆ. ಅವರು ಮಾರ್ಗದರ್ಶನ ನೀಡುವುದರ ಜತೆಗೆ ತಂಡದ ಸದಸ್ಯರ ಸಂಖ್ಯೆಯನ್ನು ಪರಿಶೀಲಿಸುವುದು, ಸಂವಹನ ಹಾಗೂ ತುರ್ತು ಪರಿಸ್ಥಿತಿಯಲ್ಲಿ ನೆರವು ನೀಡುವ ಜವಾಬ್ದಾರಿ ಹೊಂದಿರುತ್ತಾರೆ.
ಮೊಬೈಲ್ ನೆಟ್ವರ್ಕ್ ಲಭ್ಯವಿಲ್ಲದ ಅರಣ್ಯ ಪ್ರದೇಶಗಳಲ್ಲಿಯೂ ರಕ್ಷಣಾ ಕಾರ್ಯಾಚರಣೆ ಸುಗಮವಾಗಲು GPS ಆಧಾರಿತ ಸಂವಹನ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಸ್ಪಷ್ಟವಾದ ದಾರಿಸೂಚಕ ಫಲಕಗಳು, ಗುರುತಿಸಲಾದ ಹಾದಿಗಳು, ವಿಶ್ರಾಂತಿ ಸ್ಥಳಗಳು ಹಾಗೂ ಬೇಸ್ಕ್ಯಾಂಪ್ಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಇಲಾಖೆ ಮುಂದಾಗಿದೆ.
ವನ್ಯಜೀವಿಗಳ ಚಲನವಲನಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹುಲಿ, ಚಿರತೆ, ಆನೆ ಅಥವಾ ಕರಡಿ ಮುಂತಾದ ವನ್ಯಜೀವಿಗಳ ಚಲನವಲನ ಹೆಚ್ಚಾದರೆ ಸಂಬಂಧಪಟ್ಟ ಟ್ರೆಕ್ಕಿಂಗ್ ಮಾರ್ಗವನ್ನು ತಾತ್ಕಾಲಿಕವಾಗಿ ಮುಚ್ಚುವ ಅಥವಾ ಪ್ರವೇಶ ನಿರ್ಬಂಧಿಸುವ ಅಧಿಕಾರ ಅರಣ್ಯ ಇಲಾಖೆಗೆ ಇರಲಿದೆ. 2026ರಲ್ಲಿ ಎಂಎಂ ಹಿಲ್ಸ್ನಲ್ಲಿ ಚಿರತೆ ದಾಳಿ, ಕೊಡಗಿನ ತಡಿಯಂಡಮೋಲ್ನಲ್ಲಿ ಟ್ರೆಕ್ಕರ್ ನಾಪತ್ತೆ ಹಾಗೂ ಬಂಡಾಜೆ ಜಲಪಾತದಂತಹ ಘಟನೆಗಳ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.
ಅಗತ್ಯವಿದ್ದಲ್ಲಿ ಬ್ಲ್ಯಾಕ್ಲಿಸ್ಟ್ ಮಾಡುವ ಕ್ರಮ ;
ತುರ್ತು ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆ, ಪೊಲೀಸರು, ಎಸ್ಡಿಆರ್ಎಫ್, ಡ್ರೋನ್ಗಳು ಹಾಗೂ ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಸಮನ್ವಯಿತ ರಕ್ಷಣಾ ಕಾರ್ಯಾಚರಣೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ಅಗತ್ಯವಿದ್ದಲ್ಲಿ ಬ್ಲ್ಯಾಕ್ಲಿಸ್ಟ್ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮುಂದೆ ಟ್ರೆಕ್ಕಿಂಗ್ ಮಾರ್ಗಗಳನ್ನು ಪರಿಸ್ಥಿತಿಗೆ ಅನುಗುಣವಾಗಿ ಹಂತ ಹಂತವಾಗಿ ತೆರೆಯಲಾಗುತ್ತದೆ. ಸುರಕ್ಷತೆ, ವನ್ಯಜೀವಿಗಳ ಚಲನವಲನ, ಮಾರ್ಗದ ಸ್ಥಿತಿ ಹಾಗೂ ಪ್ರವಾಸಿಗರ ಸಂಖ್ಯೆಯನ್ನು ಪರಿಗಣಿಸಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ.
Trekking: New rules for 39 forest trails in Karnataka – ತುಳು ಟೈಮ್ಸ್
ಇದನ್ನೂ ಓದಿ : ಲವಂಗದಿಂದ ಧನಲಾಭ? ನಿಜಕ್ಕೂ ಫಲ ಕೊಡುತ್ತಾ ಈ ಪರಿಹಾರ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











