ಉಡುಪಿ : Tulu Times l ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಳೆದ ಒಂದು ದಶಕದಿಂದ ರಾಜ್ಯದ ಅಗ್ರ ಎರಡು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸರ್ಕಾರಿ ಶಾಲೆಗಳು ಇದೀಗ ತೀವ್ರ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಸಾವಿರಾರು ಖಾಲಿ ಹುದ್ದೆಗಳ ನಡುವೆ ಅನೇಕ ಶಾಲೆಗಳು ಅತಿಥಿ ಶಿಕ್ಷಕರು ಹಾಗೂ ಸ್ಥಳೀಯ ದಾನಿಗಳ ನೆರವಿನಿಂದಲೇ ಕಾರ್ಯನಿರ್ವಹಿಸುತ್ತಿವೆ.

ಸರ್ಕಾರಿ ನಿಯಮಗಳ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರ ನೇಮಕಕ್ಕೆ ಅವಕಾಶವಿಲ್ಲದ ಕಾರಣ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು, ಹಳೆ ವಿದ್ಯಾರ್ಥಿ ಸಂಘಗಳು ಹಾಗೂ ಸ್ಥಳೀಯ ದಾನಿಗಳು ತಮ್ಮ ಸ್ವಂತ ನಿಧಿಯಿಂದ ಗೌರವ ಶಿಕ್ಷಕರನ್ನು ನೇಮಿಸುತ್ತಿದ್ದು, ಇವರಿಗೆ ಸರ್ಕಾರದಿಂದ ವೇತನ ದೊರೆಯುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,054 ಹಾಗೂ ಉಡುಪಿ ಜಿಲ್ಲೆಯಲ್ಲಿ 655 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಎರಡು ಜಿಲ್ಲೆಗಳಲ್ಲೂ ಒಟ್ಟು 9,795 ಮಂಜೂರಾದ ಶಿಕ್ಷಕರ ಹುದ್ದೆಗಳ ಪೈಕಿ 6,695 ಮಾತ್ರ ಭರ್ತಿಯಾಗಿದ್ದು, 2,998 ಹುದ್ದೆಗಳು ಖಾಲಿ ಉಳಿದಿವೆ.
ದಕ್ಷಿಣ ಕನ್ನಡದಲ್ಲಿ ಪ್ರಾಥಮಿಕ ಶಾಲೆಗಳ 4,500 ಹುದ್ದೆಗಳ ಪೈಕಿ 1,705 ಹಾಗೂ ಪ್ರೌಢಶಾಲೆಗಳ 1,522 ಹುದ್ದೆಗಳ ಪೈಕಿ 383 ಹುದ್ದೆಗಳು ಖಾಲಿಯಿವೆ. ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳ 709 ಮತ್ತು ಪ್ರೌಢಶಾಲೆಗಳ 201 ಹುದ್ದೆಗಳು ಖಾಲಿ ಇವೆ. ಶಿಕ್ಷಕರ ಕೊರತೆಯಿಂದ ಅನೇಕ ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಹಲವು ತರಗತಿಗಳನ್ನು ಒಂದೇ ವೇಳೆ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯವಾರು ಬೋಧನೆ ಮತ್ತು ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನ ನೀಡುವುದು ಕಷ್ಟಕರವಾಗಿದೆ. ಇದಲ್ಲದೆ ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ, ಚುನಾವಣೆ ಕರ್ತವ್ಯ ಸೇರಿದಂತೆ ಹಲವು ಆಡಳಿತಾತ್ಮಕ ಹೊಣೆಗಾರಿಕೆಗಳನ್ನೂ ಶಿಕ್ಷರೇ ನಿರ್ವಹಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಲೋಕೇಶ್ ಶಶಿಧರ್, ಖಾಲಿ ಹುದ್ದೆಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶಾಶ್ವತ ಶಿಕ್ಷಕರ ನೇಮಕ ಅಥವಾ ವರ್ಗಾವಣೆ ಆಗುವವರೆಗೆ ಸರ್ಕಾರದ ಆದೇಶದಂತೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Guest teachers are the mainstay for government schools in Dakshina Kannada and Udupi; 2,998 teacher posts are vacant – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯದಲ್ಲಿ ಜು.22ರಂದು ಪತ್ರಿಕಾ ದಿನಾಚರಣೆ ಹಾಗೂ ಆಟಿ ಸಂಭ್ರಮ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/JXk_wxj5_SY











