ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಸೌತಡ್ಕ ಕ್ಷೇತ್ರಗಳಲ್ಲಿ ಜನಸಾಗರ

ಕರ್ನಾಟಕ : Tulu Times l ಬೇಸಿಗೆ ರಜೆಯ ಕೊನೆಯ ವಾರಾಂತ್ಯದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಮಹಾಪೂರ ಕಂಡುಬಂದಿದೆ. ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ‌ ಮಂಜುನಾಥ ದೇವಸ್ಥಾನ ಹಾಗೂ ಸೌತಡ್ಕ ಮಹಾಗಣಪತಿ ದೇವಸ್ಥಾನಗಳಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು.

ಭಾನುವಾರ ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು ಎಂದು ಅಂದಾಜಿಸಲಾಗಿದೆ. ಬೆಳಗ್ಗಿನಿಂದಲೇ ಕುಮಾರಧಾರಾ ನದಿತಟದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದ್ದು, ಸಾವಿರಾರು ಭಕ್ತರು ಪವಿತ್ರ ಸ್ನಾನ ಮಾಡಿ ದೇವರ ದರ್ಶನಕ್ಕೆ ತೆರಳಿದರು. ಕುಮಾರಧಾರಾ ಸೇತುವೆಯಿಂದ ದೇವಾಲಯದವರೆಗೆ ವಾಹನಗಳ ಉದ್ದ ಸಾಲು ಕಂಡುಬಂದಿದ್ದು, ರಥಬೀದಿವರೆಗೆ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ದೇವಾಲಯದ ಸುತ್ತಮುತ್ತಲಿನ ಪಾರ್ಕಿಂಗ್ ಸ್ಥಳಗಳು ತುಂಬಿ ಹೋಗಿದ್ದರಿಂದ ರಸ್ತೆ ಬದಿಗಳಲ್ಲಿಯೂ ವಾಹನಗಳನ್ನು ನಿಲ್ಲಿಸಲಾಗಿತ್ತು. ಕುಕ್ಕೆ ದೇವಸ್ಥಾನದಿಂದ ಆದಿ ಸುಬ್ರಹ್ಮಣ್ಯ ದೇವಸ್ಥಾನದವರೆಗೆ ಭಕ್ತರ ಸಂಚಾರ ಹೆಚ್ಚಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಧರ್ಮಸ್ಥಳ‌ ಮಂಜುನಾಥೇಶ್ವರ ದೇವಸ್ಥಾನದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಬೇಸಿಗೆ ರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ದೇವರ ಆಶೀರ್ವಾದ ಪಡೆದರು.‌ಬೆಳಗ್ಗಿನಿಂದಲೇ ದರ್ಶನಕ್ಕಾಗಿ ಉದ್ದ ಸಾಲುಗಳು ಕಂಡುಬಂದವು. ಕ್ಷೇತ್ರದ ಅತಿಥಿಗೃಹಗಳು ಸಂಪೂರ್ಣ ಭರ್ತಿಯಾಗಿದ್ದವು. ಸೋಮವಾರ ನಡೆಯಲಿರುವ ಪಟ್ಟಣಾಜೆ ಉತ್ಸವದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಈ ಉತ್ಸವದ ನಂತರ ದೀಪಾವಳಿವರೆಗೆ ರಂಗಪೂಜೆ ಮತ್ತು ಇತರೆ ವಿಶೇಷ ಸೇವೆಗಳು ನಡೆಯದ ಕಾರಣ, ಅನೇಕ ಭಕ್ತರು ಭಾನುವಾರವೇ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದರು.

ಸೌತಡ್ಕ ಮಹಾಗಣಪತಿ ದೇವಾಲಯದಲ್ಲೂ ಭಕ್ತರ ದಟ್ಟಣೆ ಹೆಚ್ಚಿತ್ತು. ಧರ್ಮಸ್ಥಳಕ್ಕೆ ಬಂದ ಅನೇಕ ಭಕ್ತರು ಸೌತಡ್ಕ ಕ್ಷೇತ್ರಕ್ಕೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರ ಹೆಚ್ಚಿದ ಸಂಖ್ಯೆಯಿಂದ ಉಜಿರೆ ಪಟ್ಟಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕೊಕ್ಕಡ–ನಿಡ್ಲೆ ರಸ್ತೆಯಲ್ಲಿ ವಾಹನಗಳ ಒತ್ತಡ ಹೆಚ್ಚಾಗಿ ಕೆಲಕಾಲ ಟ್ರಾಫಿಕ್ ಸಮಸ್ಯೆ ಎದುರಾಯಿತು. ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕಿಸುವ ಮಾರ್ಗದಲ್ಲಿಯೂ ವಾಹನಗಳ ಸಾಲು ಕಂಡುಬಂದಿದ್ದು, ಪ್ರಯಾಣಿಕರು ನಿಧಾನಗತಿಯಲ್ಲಿ ಸಂಚರಿಸುವಂತಾಯಿತು.

Ocean of people in Subrahmanya, Dharmasthala and Sautadka constituencies – ತುಳು ಟೈಮ್ಸ್

ಇದನ್ನೂ ಓದಿ : ಜೈವ ವೈವಿಧ್ಯ ಸಂರಕ್ಷಣೆಯಲ್ಲಿ ಭಾರತದ ಸಾಧನೆ: ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಭಾರತ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=NM0tBe15Cbzi85Bp

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 176

You cannot copy content of this page