ನೀಟ್ : Tulu Times l ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್-2026 ಮತ್ತೆ ವಿವಾದದ ಕೇಂದ್ರಬಿಂದುವಾಗಿದೆ. 2024ರಲ್ಲಿ ದೇಶವ್ಯಾಪಿ ಆಕ್ರೋಶಕ್ಕೆ ಕಾರಣವಾಗಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಬಳಿಕ, ಇದೀಗ ಮತ್ತೊಮ್ಮೆ ಗಂಭೀರ ಅನುಮಾನಗಳು ಎದುರಾಗಿವೆ.
ರಾಜಸ್ತಾನ ರಾಜ್ಯದ ಸಿಕರ್ ಪ್ರದೇಶದಲ್ಲಿ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳ ನಡುವೆ ಹರಿದಾಡಿದ್ದ ಪ್ರಶ್ನೆಗಳ ಸಂಗ್ರಹ ಮತ್ತು ನೈಜ ನೀಟ್-2026 ಪ್ರಶ್ನೆಪತ್ರಿಕೆಯ ನಡುವೆ ದೊಡ್ಡ ಮಟ್ಟದ ಹೊಂದಾಣಿಕೆ ಕಂಡುಬಂದಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, 720 ಅಂಕಗಳಲ್ಲಿ ಸುಮಾರು 600 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಪೂರ್ವದಲ್ಲೇ ಲಭ್ಯವಾಗಿವೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಅಧಿಕಾರಿಗಳು, ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸಿರುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಮತ್ತು ಮಧ್ಯವರ್ತಿಗಳ ಪಾತ್ರದ ಮೇಲೂ ಅನುಮಾನ ವ್ಯಕ್ತವಾಗಿದೆ.
ಒಬ್ಬ ವಿದ್ಯಾರ್ಥಿ ಪ್ರಶ್ನೆಗಳ ಮಾಹಿತಿಯನ್ನು ಸ್ವೀಕರಿಸಿ ಇತರರಿಗೆ ಕಳುಹಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಂತರ ಆತನೇ ಪೊಲೀಸ್ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಳಿ ದೂರು ನೀಡಿರುವುದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಸೋರಿಕೆ ಬಹಿರಂಗವಾಗುವ ಭೀತಿಯಿಂದ ಮುಂಚಿತ ಕ್ರಮವಾಗಿ ದೂರು ನೀಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವ ರಾಜಸ್ಥಾನ ಸ್ಪೆಷಲ್ ಆಪರೇಷನ್ಸ್ ಗ್ರೂಪ್ ಎಷ್ಟು ವಿದ್ಯಾರ್ಥಿಗಳಿಗೆ ಮಾಹಿತಿ ತಲುಪಿತ್ತು ಹಾಗೂ ದೊಡ್ಡ ಮಟ್ಟದ ಅಕ್ರಮ ಜಾಲವಿದೆಯೇ ಎಂಬ ವಿಚಾರಗಳನ್ನು ಪರಿಶೀಲಿಸುತ್ತಿದೆ. ಇನ್ನೊಂದೆಡೆ, ಎನ್ ಟಿಎ ತನಿಖಾ ವರದಿಗಾಗಿ ಕಾಯುತ್ತಿದೆ. ತನಿಖೆಯ ಅಂತಿಮ ಫಲಿತಾಂಶದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ 2024ರ ನೀಟ್ ವಿವಾದದ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ. ಆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ, ಅಂಕಗಳ ಅಕ್ರಮ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ಅನುಮಾನಗಳು ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿದ್ದವು. ಪ್ರಕರಣವು ಸುಪ್ರೀಂ ಕೋರ್ಟ್ ಗಮನಕ್ಕೂ ಹೋಗಿತ್ತು. ಈ ಹೊಸ ಆರೋಪಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದ್ದು, ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
The question paper of the exam held on May 3, 2026, was leaked – ತುಳುಟೈಮ್ಸ್
ಇದನ್ನೂ ಓದಿ :ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; ಪೊಲೀಸ್ ದಾಳಿ, ಮೂವರ ಬಂಧನ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=zf-R7de8wpZQgXKC











