ನವದೆಹಲಿ : Tulu Times l ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಭರಿತ ರಾಜಕೀಯ ಚಳವಳಿಯಾಗಿ ಆರಂಭವಾದ ‘ಕಾಕ್‌ರೋಚ್ ಜನತಾ ಪಾರ್ಟಿ’ ಇದೀಗ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಈ ಸಂಘಟನೆಯ ಇನ್‌ಸ್ಟಾಗ್ರಾಂ ಖಾತೆ 18 ಮಿಲಿಯನ್‌ಗಿಂತ ಹೆಚ್ಚು ಅನುಯಾಯಿಗಳನ್ನು ಪಡೆದು, ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗಳಿಗಿಂತಲೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಗಳಿಸಿದೆ. ಇದೇ ವೇಳೆ, ಸಿಜೆಪಿಯ ಎಕ್ಸ್ (ಹಳೆಯ ಟ್ವಿಟರ್) ಖಾತೆಯನ್ನು ಭಾರತದಲ್ಲಿ ಕಾನೂನುಬದ್ಧ ಬೇಡಿಕೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಖಾತೆ ಬಂದ್ ಆಗುವ ಮೊದಲು ಅದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದರು.

ಈ ಆನ್‌ಲೈನ್ ಚಳವಳಿ ಮೇ 16ರಂದು ಆರಂಭವಾಗಿದ್ದು, ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗಳ ವೀಡಿಯೊಗಳು ವೈರಲ್ ಆದ ನಂತರ ಈ ಚಳವಳಿ ಹುಟ್ಟಿಕೊಂಡಿತು ಎನ್ನಲಾಗುತ್ತಿದೆ. ಬಳಿಕ ತಮ್ಮ ಹೇಳಿಕೆಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದರು. ಯುವಕರಿಂದ, ಯುವಕರಿಗಾಗಿ, ಯುವಕರ ರಾಜಕೀಯ ವೇದಿಕೆ — ಧರ್ಮನಿರಪೇಕ್ಷ, ಸಮಾಜವಾದಿ, ಪ್ರಜಾಸತ್ತಾತ್ಮಕ ಮತ್ತು ಆಲಸ್ಯಪರ ಎಂಬ ವ್ಯಂಗ್ಯ ಘೋಷಣೆಯೊಂದಿಗೆ ‘ಕಾಕ್‌ರೋಚ್ ಜನತಾ ಪಾರ್ಟಿ’ ತನ್ನನ್ನು ಪರಿಚಯಿಸಿಕೊಂಡಿತ್ತು.
ಈ ಚಳವಳಿಯ ಸ್ಥಾಪಕರಾಗಿ 30 ವರ್ಷದ ಅಭೀಜಿತ್ ಗುರುತಿಸಿಕೊಂಡಿದ್ದಾರೆ. ಅವರು ಹಿಂದೆ ರಾಜಕೀಯ ಸಂವಹನ ತಜ್ಞರಾಗಿದ್ದು, ಪ್ರಸ್ತುತ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಮೊದಲು ಕೇವಲ ಸಾಮಾಜಿಕ ಜಾಲತಾಣದ ವ್ಯಂಗ್ಯ ಅಭಿಯಾನವಾಗಿ ಆರಂಭವಾದ ಇದು ಈಗ ಯುವಕರ ಪ್ರತಿಭಟನೆಯ ರೂಪ ತಾಳುತ್ತಿದೆ. ಕೆಲವರು ಉದ್ಯೋಗ ಕೊಡಿ, ನಿರ್ಮೂಲನೆ ಬೇಡ ಮತ್ತು ಕಾಕ್ರೋಚ್ ಆಗಿರುವುದಕ್ಕೆ ಹೆಮ್ಮೆ ಇದೆ ಎಂಬ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಇನ್‌ಸ್ಟಾಗ್ರಾಂ ವೀಡಿಯೋ ಒಂದರಲ್ಲಿ ಅಭಿಜೀತ್ ದಿಪ್ಕೆ, ವ್ಯವಸ್ಥೆ ಮತ್ತು ಸಂಸ್ಥೆಗಳು ನಮ್ಮನ್ನು ಕೀಟಗಳಂತೆ ನೋಡುತ್ತಿದ್ದರೆ, ಈಗ ಯುವಕರು ಅದನ್ನೇ ತಮ್ಮ ಗುರುತಾಗಿ ಸ್ವೀಕರಿಸುತ್ತಿದ್ದಾರೆ. ಜನರು ಈಗ ‘ನಾನು ಕಾಕ್‌ರೋಚ್’ ಎಂದು ಹೆಮ್ಮೆಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಚಳವಳಿ ವ್ಯಂಗ್ಯ, ನಿರುದ್ಯೋಗ ಮತ್ತು ಯುವಜನರ ಅಸಮಾಧಾನವನ್ನು ಒಂದೇ ವೇದಿಕೆಯಲ್ಲಿ ತಂದು ದೇಶದ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ.
‘Cockroach Janata Party’ creates a huge stir on social media – ತುಳು ಟೈಮ್ಸ್
ಇದನ್ನೂ ಓದಿ : 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/6UrejBf6Tw0?si=l1VNh7T8E7LgTtH5











