ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ಇನ್ನಿಲ್ಲ

ಚಲನಚಿತ್ರ : Tulu Times l ಜನಪ್ರಿಯ ಕನ್ನಡ ನಟ, ನಿರ್ಮಾಪಕ ಹಾಗೂ ಡಬ್ಬಿಂಗ್ ಕಲಾವಿದ ದಿಲೀಪ್ ರಾಜ್ ಅವರು ಬುಧವಾರ (ಮೇ 13) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು. ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕಕ್ಕೆ ದೊಡ್ಡ ಆಘಾತ ತಂದಿದೆ.

ಕುಟುಂಬದ ಆಪ್ತರ ಮಾಹಿತಿಯ ಪ್ರಕಾರ, ದಿಲೀಪ್ ರಾಜ್ ಅವರಿಗೆ ಬುಧವಾರ ಮುಂಜಾನೆ ಮನೆಯಲ್ಲಿ ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಮೃತ ಪಟ್ಟಿರುವುದಾಗಿ ಘೋಷಿಸಿದರು. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಮೂಲಕ ದಿಲೀಪ್ ರಾಜ್ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು. ಆ ಚಿತ್ರದಲ್ಲಿ ಅವರ ಖಳನಾಯಕ ಪಾತ್ರ ಸಿನಿಪ್ರೇಕ್ಷಕರ ಗಮನ ಸೆಳೆದಿತ್ತು. ನಂತರ ‘ಯು-ಟರ್ನ್’, ‘ಬಾಯ್‌ಫ್ರೆಂಡ್’, ‘ಮಿಲನ’, ‘ಟೋನಿ’, ‘ಭೈರವಿ’, ಮಿಂಚಾಗಿ ನೀನು ಬರಲು’, ‘ಸೆವೆನ್ O ಕ್ಲಾಕ್’, ‘ಕ್ಷಣ ಕ್ಷಣ’ ಹಾಗೂ ಇತ್ತೀಚಿನ ‘ಲವ್ ಮಾಕ್‌ಟೇಲ್ 3’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದರು.

ಕಿರುತೆರೆಯಲ್ಲೂ ದಿಲೀಪ್ ರಾಜ್ ದೊಡ್ಡ ಹೆಸರು ಮಾಡಿದ್ದು, ‘ಕಂಬದ ಮನೆ’ ಧಾರಾವಾಹಿಯ ಮೂಲಕ ಅವರು ಟಿವಿ ಲೋಕಕ್ಕೆ ಪ್ರವೇಶಿಸಿದ್ದರು. ಬಳಿಕ ‘ಜನನಿ’, ‘ಅರ್ಧ ಸತ್ಯ’, ‘ರಂಗೋಲಿ’, ‘ಮಾಂಗಲ್ಯ’, ‘ಪ್ರೀತಿಯಾಗತಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ವಿಶೇಷವಾಗಿ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಾಯಕನಾಗಿ ಅವರು ಮನೆಮಾತಾಗಿದ್ದರು. ನಂತರ ತಮ್ಮ ‘ಡಿಆರ್ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಪ್ರಸ್ತುತ ಪ್ರಸಾರವಾಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯ ನಿರ್ಮಾಪಕರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದರು.

ನಟನೆ ಮತ್ತು ನಿರ್ಮಾಣದ ಜೊತೆಗೆ ದಿಲೀಪ್ ರಾಜ್ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಅವರು ಖ್ಯಾತ ಡಬ್ಬಿಂಗ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ನೃತ್ಯ ಸಂಯೋಜನೆಯತ್ತ ಆಸಕ್ತಿ ಹೊಂದಿದ್ದ ಅವರು ಬಳಿಕ ನಾಟಕ ತಂಡ ಸೇರಿ, ನಂತರ ಸಿನಿರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ದಿಲೀಪ್ ರಾಜ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ಅಭಿಮಾನಿಗಳು ಹಾಗೂ ಕಿರುತೆರೆ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Sandalwood actor Dilip Raj is no more. – ತುಳುಟೈಮ್ಸ್

ಇದನ್ನೂ ಓದಿ :ಯಾವಾಗಲೂ ಬೆಕ್ಕುಗಳನ್ನು ಮುದ್ದಾಡುವವರ ಮನಸ್ಥಿತಿ ಏನು? ಮನೋವಿಜ್ಞಾನ ಹೇಳುವ ಕುತೂಹಲಕರ ಸಂಗತಿ ಏನು?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://www.youtube.com/live/4pEuD7fDOuo?si=JGPshbOu4K2epgXl

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page