ಸುಳ್ಯ: Tulu Times l ಇಲ್ಲಿನ ಕುರುಂಜಿಭಾಗ್‌ನಲ್ಲಿರುವ ಕೆ.ವಿ.ಜಿ. ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಸಂಸ್ಥೆಯ ವತಿಯಿಂದ ಸೆಪ್ಟೆಂಬರ್ 8ರಂದು ಕೆ.ವಿ.ಜಿ. ಸಭಾಂಗಣದಲ್ಲಿ ವಿಶ್ವ ಫಿಸಿಯೋಥೆರಪಿ ದಿನ–2026, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವರ್ಷದ ಜಾಗತಿಕ ಧೈಯವಾಕ್ಯವಾದ ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಎಂಬ ವಿಷಯವನ್ನು ಆಧರಿಸಿ ಈ ಬಾರಿಯ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷರು ಹಾಗೂ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಕೆ.ವಿ. ಚಿದಾನಂದ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್ ಭಾಗವಹಿಸಿ ಶುಭಕೋರಿದರು. ವೇದಿಕೆಯಲ್ಲಿ ಕೆ.ವಿ.ಜಿ. ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ. ಮನೀಶ್ ಆಚಾರ್ಯ ಹಾಗೂ ಅಸೋಸಿಯೇಟ್ ಪ್ರೊಫೆಸರ್ ಡಾ. ವಿ. ಮಹೇಶ್ ರೆಡ್ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳಾಗಿ ಕೆ.ವಿ.ಜಿ. ಫಿಸಿಯೋಥೆರಪಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿ. ಮಹೇಶ್ ರೆಡ್ಡಿ ಹಾಗೂ ಉಪನ್ಯಾಸಕ ಡಾ. ರಾಹುಲ್ ಎಂ. ಭಾಗವಹಿಸಿದ್ದರು. ಅವರು ಹೃದಯಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯು ಪೀಡಿತ ರೋಗಿಗಳ ಆರೈಕೆ, ಪುನಶ್ಚೇತನ ಹಾಗೂ ದೈನಂದಿನ ಚೇತರಿಕೆಯಲ್ಲಿ ಫಿಸಿಯೋಥೆರಪಿಯ ಅತ್ಯಂತ ಪ್ರಮುಖ ಪಾತ್ರ ಕುರಿತು ವಿಸ್ತೃತ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ, ದಿನನಿತ್ಯದ ಆರೋಗ್ಯ ನಿರ್ವಹಣೆಯಲ್ಲಿ ಮತ್ತು ಜಟಿಲ ರೋಗಗಳ ನಿವಾರಣೆಯಲ್ಲಿ ಫಿಸಿಯೋಥೆರಪಿಯ ಮಹತ್ವವನ್ನು ಸಾರುವ ಜಾಗೃತಿ ಕಿರು ಪ್ರಹಸನವನ್ನು ಕಾಲೇಜಿನ ವಿದ್ಯಾರ್ಥಿಗಳು ಸುಂದರವಾಗಿ ಪ್ರಸ್ತುತಪಡಿಸಿ ಗಮನ ಸೆಳೆದರು. ಸಮಾರಂಭದಲ್ಲಿ ಕೆ.ವಿ.ಜಿ. ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರಾದ ಡಾ. ಪ್ರಮೋದ್ ಕೆ.ಜೆ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಡಾ. ಮನೀಶ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿನಿ ಮೀನಾಕ್ಷಿ ವಂದನಾರ್ಪಣೆ ಮಾಡಿದರು.
KVG, Sullia: Celebration of ‘World Physiotherapy Day 2026’ – ತುಳು ಟೈಮ್ಸ್
ಇದನ್ನೂ ಓದಿ : 80ರ ದಶಕಕ್ಕೆ ಕರೆದೊಯ್ಯುತ್ತಿದೆ ಎಐ ಫೋಟೋ ಟ್ರೆಂಡ್
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











