Udupi: ಉಡುಪಿ ಜಿಲ್ಲೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದಲ್ಲಿ ಹೆಸರುವಾಸಿ. ಅದರಲ್ಲೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ರಾಜ್ಯಕ್ಕೆ ತಿಳಿದಿದೆ. ಇಂತಹ ಜಿಲ್ಲೆಯಲ್ಲಿ ಸದ್ಯ ಕನ್ನಡ ಮಾಧ್ಯಮ ದಲ್ಲಿ ಕಲಿಯುವ ವಿದ್ಯಾರ್ಥಿಗಳ ಮೇಲೆ ಸರಕಾರ ಗದಾ ಪ್ರಹಾರ ಮಾಡಲು ಹೊರಟಿದೆ ಎಂದರೆ ನೀವು ನಂಬುತ್ತೀರಾ. ನೀವು ನಂಬಲೇಬೇಕು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಆರು ಶಿಕ್ಷಕರನ್ನ ವರ್ಗಾಯಿಸುವ ಮೂಲಕ ಸರಕಾರ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಲು ಹೊರಟಿದೆ.
ಕುಮ್ರಗೋಡು ಶಾಲೆಯ ಮೇಲೆ ಸರ್ಕಾರದ ಕೆಂಗಣ್ಣು!
ಹೌದು ಉಡುಪಿ ಜಿಲ್ಲೆ ಗುಣಮಟ್ಟದ ಶಿಕ್ಷಣಕ್ಕೆ ಈ ಮೊದಲಿನಿಂದಲೂ ಹೆಸರುವಾಸಿಯಾದ ಜಿಲ್ಲೆ. ಮಕ್ಕಳನ್ನು ಎಳವೆಯಿಂದಲೇ ಶೈಕ್ಷಣಿಕ ವಿಚಾರಗಳತ್ತ ಒಲವು ಬೆಳೆಸಿಕೊಳ್ಳಲು ಸಹಕಾರಿಯದ ವಾತಾವರಣ ಈ ಜಿಲ್ಲೆಯಲ್ಲಿದೆ. ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ಸಹಕಾರ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಪ್ರಮುಖ ಅಂಶಗಳು ಎಂದರೆ ತಪ್ಪಾಗಲಾರದು. ಸದ್ಯ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಹಂದಾಡಿ ಕುಮ್ರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಸರ್ಕಾರದ ಕೆಂಗಣ್ಣು ಬಿದ್ದಿದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ನಡೆಸುತ್ತಿರುವ ಆರು ಮಂದಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ಏಕಾಏಕಿ ವರ್ಗಾಯಿಸಿ ಆದೇಶ ಹೊರಡಿಸಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿ ಆದೇಶ ಹೊರಡಿಸಿರುವುದು ಸದ್ಯ ವಿದ್ಯಾರ್ಥಿಗಳ ಪೋಷಕರನ್ನ ಕಸಿವಿಸಿ ಗೊಳಿಸಿದೆ.
ಏಕಾಏಕಿ ಆರು ಮಂದಿ ಶಿಕ್ಷಕರನ್ನುದಿಡೀರ್ ವರ್ಗಾವಣೆ ಯಾಕೆ..?
ಈ ಶಾಲೆಯಲ್ಲಿ ಒಟ್ಟು 175 ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಂಟು ಮಂದಿ ಶಿಕ್ಷಕರು ಇಲ್ಲಿನ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಗಳನ್ನ ಹೇಳಿ ಕೊಡುತ್ತಿದ್ದಾರೆ. ಆದರೆ ಏಕಾಏಕಿ ಶಿಕ್ಷಣ ಇಲಾಖೆ ಎಂಟು ಮಂದಿಯ ಶಿಕ್ಷಕರಲ್ಲಿ ಆರು ಮಂದಿಯನ್ನು ದಿಢೀರ್ ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿರುವುದು ಪೋಷಕರು ಮತ್ತು ಶಾಲೆಯ ಹಳೆ ವಿದ್ಯಾರ್ಥಿಗಳ ಆಕ್ರೋಶಕ್ಕೂ ಕಾರಣವಾಗಿದೆ. ನಿಟ್ಟಿನಲ್ಲಿ ಪೋಷಕರು ಹಳೆಯ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿ ದಿಡೀರ್ ಕ್ರಮ ಕೈಗೊಂಡಿರುವ ಕುರಿತು ಆಕ್ರೋಶ ಹೊರಹಾಕಿ ಪ್ರತಿಭಟನೆಯನ್ನು ಕೂಡ ನಡೆಸಿದ್ದಾರೆ. ಇದರ ಹಿಂದೆ ಖಾಸಗಿ ಶಾಲೆಗಳ ಕೈವಾಡವಿದೆ ಎನ್ನುವುದು ಇಲ್ಲಿನ ಪೋಷಕರ ಆರೋಪ. ಉತ್ತಮ ವ್ಯವಸ್ಥೆಗಳನ್ನು ಹೊಂದಿರುವ ಕುಮ್ರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇತ್ತೀಚಿನ ದಿನಗಳಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡು ಉತ್ತಮ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೊಂದಿದೆ. ಹೀಗಾಗಿ ಖಾಸಗಿ ಶಾಲೆಯ ಒತ್ತಡದ ಮೇರೆಗೆ ಸರಕಾರ ಈ ನಿರ್ಧಾರವನ್ನ ಕೈಗೊಂಡಿರಬಹುದು ಎನ್ನುವುದು ಸ್ಥಳೀಯ ಆರೋಪ.
ಶಿಕ್ಷಣ ಪ್ರೇಮಿಗಳು ಹೇಳೋದೇನು..?
ಒಟ್ಟಾರೆಯಾಗಿ, ಇದು ಕೇವಲ ಒಂದು ಗುಣಮಟ್ಟದ ಶಿಕ್ಷಣವನ್ನ ನೀಡುತ್ತಿರುವ ಕುಮ್ರಗೋಡು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಕಥೆಯಲ್ಲ. ಇಂಥಹ ಹಲವು ಶಾಲೆಯ ಕಥೆ ಇದೇ ರೀತಿ ಇದೆ. ಸರ್ಕಾರಿ ಶಾಲೆಯ ಶಿಕ್ಷಕರ ವರ್ಗಾವಣೆ ರಾಜ್ಯ ಸರ್ಕಾರದ ಕನ್ನಡ ಶಾಲೆಗಳ ಪರ ಇರುವ ಕಾಳಜಿಯನ್ನ ತೋರಿಸುತ್ತಿದೆ. ಅದರಲ್ಲೂ ಕನ್ನಡದ ಮಾಸ ನವಂಬರ್ ನಲ್ಲಿ ಈ ರೀತಿಯಾದ ಬೆಳವಣಿಗೆ ನಡೆದಿರುವುದು ಶಿಕ್ಷಣದ ಕಾಶಿ ಉಡುಪಿ ಜಿಲ್ಲೆಗೆ ಸರ್ಕಾರ ಮಾಡಿದ ಮಹಾ ಮೋಸ ಎನ್ನುತ್ತಿದ್ದಾರೆ ಶಿಕ್ಷಣ ಪ್ರೇಮಿಗಳು.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











