ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತಪ್ಪು ಕನ್ನಡ ಬಳಕೆ ಮಾಡಿದರೆ ಕ್ರಮ : ಕೇಂದ್ರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮನವಿ

ಬೆಂಗಳೂರು: Tulu Times l ಬ್ಯಾಂಕ್‌ಗಳು, ಆಸ್ಪತ್ರೆಗಳು ಹಾಗೂ ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು ಸಾರ್ವಜನಿಕ ಸಂವಹನದಲ್ಲಿ ಬಳಸುತ್ತಿರುವ ತಪ್ಪು ಹಾಗೂ ಅರ್ಥಹೀನ ಕನ್ನಡಕ್ಕೆ ಕಡಿವಾಣ ಹಾಕುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು, ಸಾರ್ವಜನಿಕರಿಗೆ ನೀಡುವ ಮಾಹಿತಿ, ಸೂಚನಾ ಫಲಕಗಳು, ಸುತ್ತೋಲೆಗಳು ಹಾಗೂ ಇತರ ಪ್ರಕಟಣೆಗಳಲ್ಲಿ ಸರಳ, ಸ್ಪಷ್ಟ ಮತ್ತು ವ್ಯಾಕರಣಬದ್ಧ ಕನ್ನಡ ಬಳಕೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕರಿಗೆ ಅರ್ಥವಾಗದ ರೀತಿಯ ವಾಕ್ಯಗಳು ;

ಇತ್ತೀಚಿನ ದಿನಗಳಲ್ಲಿ ಕೆಲವು ಕಂಪನಿಗಳು, ಬ್ಯಾಂಕ್‌ಗಳು ಮತ್ತು ಆಸ್ಪತ್ರೆಗಳು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಮಾಹಿತಿಯನ್ನು ಕನ್ನಡಕ್ಕೆ ಭಾಷಾಂತರಿಸಲು ಕೃತಕ ಬುದ್ಧಿಮತ್ತೆ ಹಾಗೂ ಗೂಗಲ್ ಟ್ರಾನ್ಸ್‌ಲೇಟ್‌ನಂತಹ ಸ್ವಯಂಚಾಲಿತ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಿವೆ. ಆದರೆ ಇಂತಹ ಭಾಷಾಂತರಗಳಲ್ಲಿ ಕೆಲವೊಮ್ಮೆ ಕನ್ನಡದ ಅರ್ಥವೇ ಬದಲಾಗುವ ಅಥವಾ ಸಾರ್ವಜನಿಕರಿಗೆ ಅರ್ಥವಾಗದ ರೀತಿಯ ವಾಕ್ಯಗಳು ಸೃಷ್ಟಿಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಪ್ರಾಧಿಕಾರ ತಿಳಿಸಿದೆ.

ಕೇವಲ ಯಂತ್ರದ ಮೂಲಕ ಭಾಷಾಂತರಿಸುವ ಬದಲು, ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿರುವ ವೃತ್ತಿಪರ ಮಾನವ ಭಾಷಾಂತರಕಾರರಿಂದ ಪರಿಶೀಲನೆ ನಡೆಸಿದ ಬಳಿಕವೇ ಸಾರ್ವಜನಿಕ ಬಳಕೆಗೆ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎಂದು ಬಿಳಿಮಲೆ ಸಲಹೆ ನೀಡಿದ್ದಾರೆ. ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಬ್ಯಾಂಕ್‌ಗಳು, ಆಸ್ಪತ್ರೆಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕನ್ನಡವನ್ನು ಕೇವಲ ಮತ್ತೊಂದು ಭಾಷೆಯ ಯಾಂತ್ರಿಕ ಅನುವಾದವೆಂದು ಪರಿಗಣಿಸದೆ, ಅದರ ಅರ್ಥ, ವ್ಯಾಕರಣ ಹಾಗೂ ಭಾಷಾ ಸೊಗಡನ್ನು ಕಾಪಾಡಿಕೊಂಡು ಬಳಸಬೇಕು ಎಂದು ಪ್ರಾಧಿಕಾರ ಒತ್ತಾಯಿಸಿದೆ.

ಕನ್ನಡ ಭಾಷೆಯ ಗುಣಮಟ್ಟ ಮತ್ತು ಗೌರವವನ್ನು ಕಾಪಾಡುವುದು ಅಗತ್ಯ ;

ಅಲ್ಲದೆ, ಕನ್ನಡ ಬಳಕೆಯ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ವ್ಯವಸ್ಥೆ ರೂಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ತಪ್ಪು ಕನ್ನಡ ಬಳಕೆಯಿಂದ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲದೆ, ಕನ್ನಡ ಭಾಷೆಯ ಗುಣಮಟ್ಟ ಮತ್ತು ಗೌರವವನ್ನು ಕಾಪಾಡುವುದು ಅಗತ್ಯ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

Process to purchase 15,000 new buses set in motion: Transport Minister Byrathi Suresh
Credit to original source

Action if ‘wrong Kannada’ is used: Kannada Development Authority appeals to the Centre – ತುಳು ಟೈಮ್ಸ್

ಇದನ್ನೂ ಓದಿ :ಬಾಳಿಲದಲ್ಲಿ ‘ಸ್ವಾಸ್ಥ್ಯ ಆರೋಗ್ಯ ಕ್ಲಿನಿಕ್’ ಆರಂಭ: ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page