ಬೆಂಗಳೂರು : Tulu Times l ಅಪರಾಧ ಪ್ರಕರಣಗಳು ಹಾಗೂ ಇಲಾಖೆಯ ಅಧಿಕೃತ ಮಾಹಿತಿಯ ಅನಧಿಕೃತ ಸೋರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಮಾಧ್ಯಮಗಳಿಗೆ ಮಾಹಿತಿ ನೀಡುವ ಅಧಿಕಾರವನ್ನು ಆಯ್ದ ಹಿರಿಯ ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ಪೊಲೀಸ್ ಪರಿಶೀಲಕ ಎಂ.ಎ. ಸಲೀಂ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯ ಪ್ರಕಾರ, ರಾಜ್ಯದ ವಿವಿಧ ಹಂತಗಳ ಪೊಲೀಸ್ ಅಧಿಕಾರಿಗಳು ಅಪರಾಧ ತನಿಖೆ, ಕಾನೂನು ಸುವ್ಯವಸ್ಥೆ ಹಾಗೂ ಇಲಾಖೆಯ ಮಾಹಿತಿಯನ್ನು ಅಧಿಕೃತ ಪ್ರಕಟಣೆಗೆ ಮುನ್ನವೇ ಮಾಧ್ಯಮಗಳು, ಡಿಜಿಟಲ್ ವೇದಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಪೊಲೀಸ್ ಮುಖ್ಯ ಕಚೇರಿಯ ಗಮನಕ್ಕೆ ಬಂದಿದೆ. ಇದರಿಂದ ತನಿಖೆಗೆ ಅಡ್ಡಿಯಾಗುವುದು, ನ್ಯಾಯಾಂಗ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವುದು, ವ್ಯಕ್ತಿಗಳ ಗೌಪ್ಯತೆ ಉಲ್ಲಂಘನೆಯಾಗುವುದು, ತಪ್ಪು ಮಾಹಿತಿ ಹರಡುವುದು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗುವ ಸಾಧ್ಯತೆ ಇದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಯಾರಿಗೆ ಮಾಹಿತಿ ನೀಡುವ ಅಧಿಕಾರ?
ಹೊಸ ಆದೇಶದಂತೆ:
ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಥವಾ ಅವರ ಅನುಪಸ್ಥಿತಿಯಲ್ಲಿ ಡಿಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಾತ್ರ ಅಧಿಕೃತ ವಕ್ತಾರರಾಗಿರುತ್ತಾರೆ.
ರೇಂಜ್ ಮಟ್ಟದಲ್ಲಿ ಸಂಬಂಧಿತ ಐಜಿಪಿ ಅಥವಾ ಡಿಐಜಿಪಿ ಮಾತ್ರ ಮಾಧ್ಯಮಗಳೊಂದಿಗೆ ಮಾತನಾಡಬಹುದು.
ನಗರ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ಪೊಲೀಸ್ ಆಯುಕ್ತರು ಅಥವಾ ಅವರಿಂದ ಅಧಿಕೃತವಾಗಿ ನೇಮಕಗೊಂಡ ಹೆಚ್ಚುವರಿ, ಜಂಟಿ ಅಥವಾ ಉಪ ಪೊಲೀಸ್ ಆಯುಕ್ತರು ಮಾಹಿತಿ ನೀಡಬಹುದು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಮಾತ್ರ ಮಾಧ್ಯಮಗಳಿಗೆ ಮಾಹಿತಿ ನೀಡುವ ಅಧಿಕಾರ ಹೊಂದಿರುತ್ತಾರೆ.
ವಿಶೇಷ ಘಟಕಗಳ ಮಾಹಿತಿಯನ್ನು ಆಯಾ ಘಟಕಗಳ ಮುಖ್ಯಸ್ಥರು ಮಾತ್ರ ಹಂಚಿಕೊಳ್ಳಬಹುದು.

ಯಾವುದೇ ಲಿಖಿತ ಅನುಮತಿಯಿಲ್ಲದೆ ಇತರ ಪೊಲೀಸ್ ಸಿಬ್ಬಂದಿ ಮಾಧ್ಯಮಗಳಿಗೆ ಹೇಳಿಕೆ ನೀಡುವುದು, ಸಂದರ್ಶನ ನೀಡುವುದು, ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅಥವಾ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಜೊತೆಗೆ, ವೈಯಕ್ತಿಕ ಅಥವಾ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ತನಿಖೆಗೆ ಸಂಬಂಧಿಸಿದ ಮಾಹಿತಿ, ಅಪರಾಧ ಸ್ಥಳದ ಚಿತ್ರಗಳು, ಕಾರ್ಯಾಚರಣೆಯ ವಿವರಗಳು, ಗೌಪ್ಯ ಸರ್ಕಾರಿ ದಾಖಲೆಗಳು ಅಥವಾ ತನಿಖೆ, ನ್ಯಾಯಾಂಗ ಪ್ರಕ್ರಿಯೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ಯಾವುದೇ ಮಾಹಿತಿಯನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರತಿಕ್ರಿಯಿಸುವುದಕ್ಕೂ ಪೂರ್ವಾನುಮತಿ ಕಡ್ಡಾಯವಾಗಿದೆ. ಪ್ರಕೃತಿ ವಿಕೋಪ, ಸಂಚಾರ ಮಾರ್ಗ ಬದಲಾವಣೆ, ರಕ್ಷಣಾ ಕಾರ್ಯಾಚರಣೆ ಅಥವಾ ತುರ್ತು ಕಾನೂನು ಸುವ್ಯವಸ್ಥೆ ಪರಿಸ್ಥಿತಿಗಳಲ್ಲಿ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ನೀಡಬಹುದು. ಆದರೆ ಸಾಧ್ಯವಾದಷ್ಟು ಮಟ್ಟಿಗೆ ಈ ಮಾಹಿತಿ ಅಧಿಕೃತ ವಕ್ತಾರರ ಗಮನಕ್ಕೆ ತಂದು ನೀಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಹೊಸ ಮಾರ್ಗಸೂಚಿಯ ಮೂಲಕ ಪೊಲೀಸ್ ಇಲಾಖೆಯ ಅಧಿಕೃತ ಮಾಹಿತಿ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸುವ ಉದ್ದೇಶ ಹೊಂದಲಾಗಿದೆ.
Karnataka Police Department’s new circular to protect the confidentiality of investigations – ತುಳು ಟೈಮ್ಸ್
ಇದನ್ನೂ ಓದಿ : ಜೀವನದಲ್ಲಿ ಆತುರ ಬೇಡ; ತಾಳ್ಮೆಯಿದ್ದರೆ ಯಶಸ್ಸು ಖಚಿತ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/MbYWc25CAMY?feature=share











