ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯ : ದುರಸ್ತಿಯಾಗದ ರಸ್ತೆ, ಹೆಚ್ಚಿದ ಆಕ್ರೋಶ, ಗುಂಡಿಯಲ್ಲೇ ಬಾಳೆಗಿಡ ನೆಟ್ಟ ಸಾರ್ವಜನಿಕರು

ಸುಳ್ಯ: Tulu Times l ಪಟ್ಟಣದ ಜ್ಯೋತಿ ಸರ್ಕಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಯ ದುಸ್ಥಿತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ನೂರಾರು ವಾಹನಗಳು ಸಂಚರಿಸುವ ಈ ರಸ್ತೆ ಹೊಂಡ-ಗುಂಡಿಗಳಿಂದ ತುಂಬಿದ್ದು, ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರಸ್ತೆ ಗುಂಡಿಯಲ್ಲಿ ಬಾಳೆಗಿಡ ನೆಟ್ಟು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಜ್ಯೋತಿ ಸರ್ಕಲ್‌ನ ಈ ರಸ್ತೆಯ ಮೂಲಕ ಸಮೀಪದ ಮೂರು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಪ್ರತಿದಿನ ಕಾಲ್ನಡಿಗೆಯಲ್ಲಿ ಹಾಗೂ ವಾಹನಗಳಲ್ಲಿ ಸಂಚರಿಸುತ್ತಾರೆ. ಆದರೆ ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ವಿದ್ಯಾರ್ಥಿಗಳು, ಪಾದಚಾರಿಗಳು ಮತ್ತು ವಾಹನ ಸವಾರರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತು ಅಪಘಾತದ ಭೀತಿ ಮತ್ತಷ್ಟು ಹೆಚ್ಚುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ಮತ್ತೆ ದೊಡ್ಡ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಸಂಕಷ್ಟ ;

ಕುಡಿಯುವ ನೀರಿನ ಪೈಪ್ ಅಳವಡಿಕೆ ಕಾಮಗಾರಿಗಾಗಿ ಕೆಲವು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಪೈಪ್ ಅಳವಡಿಸಿದ ಬಳಿಕ ರಸ್ತೆ ಮುಚ್ಚಲಾಗಿದ್ದರೂ, ಕಾಂಕ್ರೀಟ್ ಹಾಕುವ ಬದಲು ತಾತ್ಕಾಲಿಕವಾಗಿ ಜಲ್ಲಿ ಮಿಶ್ರಣ ಹಾಕಿ ಕಾಮಗಾರಿ ಮುಗಿಸಲಾಗಿತ್ತು. ಆದರೆ ಇದು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಯಾಗಿರುವುದರಿಂದ ದಿನನಿತ್ಯ ಭಾರಿ ವಾಹನಗಳ ಸಂಚಾರ ಹೆಚ್ಚಿದ್ದು, ಜಲ್ಲಿ ಮಿಶ್ರಣ ಸಂಪೂರ್ಣ ಎದ್ದು ಹೋಗಿದೆ. ಪರಿಣಾಮ ರಸ್ತೆಯಲ್ಲಿ ಮತ್ತೆ ದೊಡ್ಡ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ಸಂಕಷ್ಟ ಉಂಟಾಗಿದೆ. ಈ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಸ್ಥಳೀಯರು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಬಳಿಕ ಒಂದು ದಿನ ದುರಸ್ತಿ ಕಾಮಗಾರಿ ನಡೆದಿದ್ದರೂ ಅದು ಸಮರ್ಪಕವಾಗಿ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ತಾತ್ಕಾಲಿಕವಾಗಿ ಹಾಕಿದ್ದ ಜಲ್ಲಿಯೂ ಈಗ ಕಿತ್ತು ಹೋಗಿರುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ.

ರಸ್ತೆ ಗುಂಡಿಯಲ್ಲೇ ಬಾಳೆಗಿಡ ನೆಟ್ಟು ಆಕ್ರೋಶ ;

ಇದರಿಂದ ಬೇಸತ್ತ ಸಾರ್ವಜನಿಕರು ಹಾಗೂ ವಾಹನ ಸವಾರರು ಇಂದು ರಸ್ತೆ ಗುಂಡಿಯಲ್ಲೇ ಬಾಳೆಗಿಡ ನೆಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಮೂಲಕ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿದ ಅವರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಬಳಸುವ ಈ ಪ್ರಮುಖ ರಸ್ತೆಯನ್ನು ತಕ್ಷಣವೇ ಗುಣಮಟ್ಟದ ಕಾಂಕ್ರೀಟ್‌ನಿಂದ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಮೊದಲು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಶಾಶ್ವತ ಕಾಮಗಾರಿ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Sullia: Road remains unrepaired, public outrage mounts; locals plant banana sapling in a pothole. – ತುಳು ಟೈಮ್ಸ್

ಇದನ್ನೂ ಓದಿ : ಸುಳ್ಯ : ದೇಶಭಕ್ತಿ ಗುಂಪುಗಾಯನ ಸ್ಪರ್ಧೆ, ಆಗಸ್ಟ್ 5ರೊಳಗೆ ವೀಡಿಯೋ ಕಳುಹಿಸಲು ಅವಕಾಶ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/_mb3O1ZHoIc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page