ಬ್ರೇಕಿಂಗ್ ನ್ಯೂಸ್
ಸುಳ್ಯ

ಸುಳ್ಯದಲ್ಲಿ ಆಟಿಕೂಟ ಸಂಭ್ರಮ: ಭ್ರಷ್ಟಾಚಾರ ನಿರ್ಮೂಲನೆಗೆ ಶಾಸಕಿ ಭಾಗೀರಥಿ ಮುರುಳ್ಯ ಕರೆ

ಸುಳ್ಯ : Tulu Times l ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಆಟಿಕೂಟ ಕಾರ್ಯಕ್ರಮ ಬುಧವಾರ ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಆಟಿ ಆಚರಣೆಯು ನಮ್ಮ ಹಿರಿಯರ ಜೀವನಾನುಭವ ಹಾಗೂ ಸಂಸ್ಕೃತಿಯನ್ನು ನೆನಪಿಸುವ ಆಚರಣೆಯಾಗಿದೆ. ಹಿರಿಯರು ಪಾಲಿಸಿಕೊಂಡು ಬಂದ ಪದ್ಧತಿಗಳು ಮೂಢನಂಬಿಕೆಗಳಲ್ಲ, ಅವು ಮೂಲ ನಂಬಿಕೆಗಳಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಾಮಾಜಿಕ ಪಿಡುಗಾದ ಲಂಚ ಹಾಗೂ ಭ್ರಷ್ಟಾಚಾರವನ್ನು ಎಲ್ಲರೂ ಸೇರಿ ನಿರ್ಮೂಲನೆ ಮಾಡಬೇಕು. ಜನರು ತಮ್ಮ ಸಮಸ್ಯೆಗಳೊಂದಿಗೆ ತನ್ನನ್ನು ಸಂಪರ್ಕಿಸಿದರೆ ಅಗತ್ಯ ಸಹಕಾರ ನೀಡಿ, ಸರ್ಕಾರಿ ಕಚೇರಿಗಳಲ್ಲಿ ಆಗಬೇಕಾದ ಕೆಲಸಗಳನ್ನು ಕಾನೂನುಬದ್ಧವಾಗಿ ಮಾಡಿಸಿಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಕೃತಿಯ ಬದಲಾವಣೆಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ;

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ, ಪತ್ರಿಕಾ ದಿನ ಹಾಗೂ ಆಟಿ ತಿಂಗಳ ಮಹತ್ವವನ್ನು ವಿವರಿಸಿದರು. ಪತ್ರಿಕೆಗಳು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮಗಳ ಮೂಲಕವೂ ಜನರಿಗೆ ಸುದ್ದಿ ತಲುಪಿಸುವ ಕೆಲಸ ಮಾಡುತ್ತಿವೆ. ಇಂದು ಜನರು ಗೂಗಲ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳು ಹೆಚ್ಚು ಮಾಹಿತಿ ಅಪ್‌ಲೋಡ್ ಮಾಡುವ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ ಎಂದು ಹೇಳಿದರು. ಪ್ರಕೃತಿಯ ಬದಲಾವಣೆಯನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ ಅವರು, ಹಿಂದೆ ಆಟಿ ತಿಂಗಳು ಕಷ್ಟಕರವಾಗಿದ್ದರಿಂದ ಶುಭಕಾರ್ಯಗಳನ್ನು ನಡೆಸುತ್ತಿರಲಿಲ್ಲ. ಆದರೆ ಇಂದು ಕಾಲ ಬದಲಾಗಿದ್ದು, ಆಟಿ ತಿಂಗಳಲ್ಲಿಯೇ ಮದುವೆ ಸೇರಿದಂತೆ ವಿವಿಧ ಶುಭಕಾರ್ಯಗಳು ನಡೆಯುತ್ತಿರುವುದು ಸಮಾಜದಲ್ಲಿನ ಬದಲಾವಣೆಯ ಸಂಕೇತವಾಗಿದೆ ಎಂದರು.

ಉತ್ತಮ ಸೇವೆಗೆ ಪುರಸ್ಕಾರ ;

ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕರಾದ ಅಪ್ಪಕುಂಞ ನಾರ್ಕೋಡು ಹಾಗೂ ಎಸ್.ಎನ್. ಪ್ರಸಾದ್ ಪಂಜಿಕಲ್ಲು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸುದ್ದಿ ಬಿಡುಗಡೆ ಪತ್ರಿಕೆ ಹಮ್ಮಿಕೊಂಡಿರುವ ಉತ್ತಮ ಸೇವೆಗೆ ಪುರಸ್ಕಾರ – ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಅಭಿಯಾನದ ಫಲಕವನ್ನು ಶಾಸಕಿ ಹಾಗೂ ಅತಿಥಿಗಳಿಗೆ ನೀಡಿ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಪ್ರತಿಜ್ಞೆ ಬೋಧಿಸಿದ ಹರೀಶ್ ಬಂಟ್ವಾಳ್, ಸರ್ಕಾರಿ ಕಚೇರಿಗಳಲ್ಲಿ ಕೆಲಸದ ವಿಳಂಬ ಹಾಗೂ ಲಂಚದ ಹಾವಳಿಯನ್ನು ತಡೆಗಟ್ಟಲು ಜನಪ್ರತಿನಿಧಿಗಳು ನಿಯಮಿತವಾಗಿ ಸಾರ್ವಜನಿಕ ಅಹವಾಲುಗಳನ್ನು ಆಲಿಸಿ, ಅಧಿಕಾರಿಗಳಿಂದ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಅವರ ಮಿಮಿಕ್ರಿ ಕಾರ್ಯಕ್ರಮ ನಡೆಯಿತು. ನಂತರ ಆಟಿ ವಿಶೇಷ ಖಾದ್ಯಗಳ ಸಹಭೋಜನ, ಚೆನ್ನೆಮಣೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಿ ಸ್ಪರ್ಧೆಗಳು ಜರುಗಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

ಕೆಜೆಯು ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಜೆಯು ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಜಿಲ್ಲಾಧ್ಯಕ್ಷ ಈಶ್ವರ ವಾರಣಾಶಿ, ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕೆಜೆಯು ತಾಲೂಕು ಘಟಕದ ಗೌರವಾಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ ಹಾಗೂ ಕೋಶಾಧಿಕಾರಿ ಅನಿಲ್ ಕಳಂಜ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚೈತ್ರ ವಿನಯ್ ಪ್ರಾರ್ಥಿಸಿದರು. ಜಯಶ್ರೀ ಕೊಯಿಂಗೋಡಿ ಸ್ವಾಗತಿಸಿದರು. ರಮೇಶ್ ನೀರಬಿದಿರೆ ಹಾಗೂ ಅನಿಲ್ ಕಳಂಜ ಸನ್ಮಾನಿತರ ಪರಿಚಯ ವಾಚಿಸಿದರು. ಶ್ರೀಜಿತ್ ಸಂಪಾಜೆ ವಂದಿಸಿದರು. ಕೆಜೆಯು ಮಾಜಿ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

‘Aati Koota’ celebrations in Sullia: MLA Bhagirathi Murulya calls for the eradication of corruption – ತುಳು ಟೈಮ್ಸ್

ಇದನ್ನೂ ಓದಿ : ಮಳೆ ಅಭಾವದ ಪರಿಣಾಮ: ಅಕ್ಕಿ, ಬೇಳೆ, ಜೀರಿಗೆ ದರದಲ್ಲಿ ಭಾರೀ ಏರಿಕೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 8

You cannot copy content of this page