ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸೈಬರ್ ವಂಚನೆ ಪ್ರಕರಣದಲ್ಲಿ ಕರ್ನಾಟಕದಲ್ಲಿ ಫ್ರೀಜ್ ಮಾಡಿರುವ ಹಣವೆಷ್ಟು?

ಬೆಂಗಳೂರು: Tulu Times l ಸೈಬರ್ ವಂಚನೆ ಪ್ರಕರಣಗಳಲ್ಲಿ ಕಳೆದುಹೋದ ಹಣವನ್ನು ತಡೆಹಿಡಿಯುವಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಬ್ಯಾಂಕ್‌ಗಳ ‘ಲಿಯನ್ ಮಾರ್ಕಿಂಗ್’ ವ್ಯವಸ್ಥೆಯ ಮೂಲಕ ರಾಜ್ಯ ಪೊಲೀಸರು ಇದುವರೆಗೆ 436 ಕೋಟಿ ರೂ.ಹಣವನ್ನು ಫ್ರೀಜ್ ಮಾಡಲು ಯಶಸ್ವಿಯಾಗಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಎಂ.ಜಿ. ರಸ್ತೆಯ ಪೊಲೀಸ್ ವೈರ್‌ಲೆಸ್ ಮುಖ್ಯ ಕಚೇರಿಯಲ್ಲಿ ಸೈಬರ್ ಅಪರಾಧ ತಡೆ ಮತ್ತು ತನಿಖೆ ವ್ಯವಸ್ಥೆಯ ಪರಿಶೀಲನಾ ಸಭೆಯ ಬಳಿಕ ಮಾತನಾಡಿದ ಅವರು, ತಂತ್ರಜ್ಞಾನ ಆಧಾರಿತ ಸುಧಾರಣೆಗಳು, ವಿಶೇಷ ತಂಡಗಳ ರಚನೆ ಹಾಗೂ ಸಾರ್ವಜನಿಕರಿಗೆ ಸುಲಭ ದೂರು ವ್ಯವಸ್ಥೆ ಕಲ್ಪಿಸಿರುವುದರಿಂದ ಸೈಬರ್ ಅಪರಾಧ ನಿಯಂತ್ರಣದಲ್ಲಿ ರಾಜ್ಯ ಗಮನಾರ್ಹ ಸಾಧನೆ ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೆ ಸೈಬರ್ ವಂಚನೆ ಪ್ರಕರಣಗಳಲ್ಲಿ ₹2,640 ಕೋಟಿ ನಷ್ಟ ವರದಿಯಾಗಿದ್ದು, ಅದರಲ್ಲಿ ₹436 ಕೋಟಿ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. ಇದು ಒಟ್ಟು ನಷ್ಟದ ಸುಮಾರು 17 ಶೇಕಡಾ ಆಗಿದೆ. ಮಹಾರಾಷ್ಟ್ರ ₹3,203 ಕೋಟಿ ನಷ್ಟದಲ್ಲಿ ₹548 ಕೋಟಿ ಫ್ರೀಜ್ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ.

ಜನವರಿಯಿಂದ ಮೇ 2026ರವರೆಗೆ ಪೊಲೀಸ್ ವೈರ್‌ಲೆಸ್ ಘಟಕಕ್ಕೆ 10.33 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಸೈಬರ್ ವಂಚಕರು ಸುಮಾರು ₹807 ಕೋಟಿ ವಂಚನೆ ಎಸಗಿದ್ದು, ಅದರಲ್ಲಿ ₹216 ಕೋಟಿ ಹಣವನ್ನು ಸಂಪೂರ್ಣವಾಗಿ ವರ್ಗಾವಣೆಯಾಗುವ ಮುನ್ನವೇ ತಡೆಹಿಡಿಯಲಾಗಿದೆ. ಸೈಬರ್ ವಂಚನೆ ಪ್ರಕರಣಗಳ ತನಿಖೆಯನ್ನು ವೇಗಗೊಳಿಸಲು ಹಾಗೂ ಸಂತ್ರಸ್ತರ ಹಣವನ್ನು ಮರುಪಡೆಯಲು ಕರ್ನಾಟಕ ಪೊಲೀಸರು ವಿಶೇಷ ಬ್ಯಾಂಕ್ ಫಾಲೋ-ಅಪ್ ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ಅನುಮಾನಾಸ್ಪದ ಬ್ಯಾಂಕ್ ವ್ಯವಹಾರಗಳನ್ನು ತಕ್ಷಣವೇ ಲಿಯನ್ ಮಾರ್ಕಿಂಗ್ ಮಾಡಿ, ಬ್ಯಾಂಕ್‌ಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುತ್ತಿವೆ. ಇದಲ್ಲದೆ, ಪೊಲೀಸ್ ವೈರ್‌ಲೆಸ್ ಸಿಬ್ಬಂದಿಗೆ ಸೈಬರ್ ತನಿಖೆ, ಸಿಸ್ಟಮ್ ಆಡಳಿತ ಮತ್ತು ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ವೇದಿಕೆಯ ಬಳಕೆ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಬ್ಯಾಂಕ್‌ಗಳೊಂದಿಗೆ ಸಂಪರ್ಕ ಸಾಧಿಸಲು, ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು, ಎಫ್‌ಐಆರ್ ದಾಖಲಿಸಲು ಹಾಗೂ ಸಂತ್ರಸ್ತರಿಗೆ ನೆರವಾಗಲು ವಿಶೇಷ ಸಂಪರ್ಕಾಧಿಕಾರಿಗಳನ್ನೂ ನೇಮಕ ಮಾಡಲಾಗಿದೆ.

ಸೈಬರ್ ಅಪರಾಧಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯಲು ಪೊಲೀಸ್ ವೈರ್‌ಲೆಸ್ ಸಂವಹನ ವ್ಯವಸ್ಥೆ ;

ಸಾರ್ವಜನಿಕರಿಗೆ ಸೈಬರ್ ದೂರು ಸಲ್ಲಿಸುವುದನ್ನು ಮತ್ತಷ್ಟು ಸುಲಭಗೊಳಿಸಲು 2025ರಲ್ಲಿ ವೆಬ್ ಆಧಾರಿತ ದೂರು ಬಾಟ್ ಹಾಗೂ 2026ರಲ್ಲಿ ವಾಟ್ಸ್ಆ್ಯಪ್ ದೂರು ಬಾಟ್ ಪರಿಚಯಿಸಲಾಗಿದೆ. ಜೊತೆಗೆ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ ಜಾರಿಗೆ ತರಲಾಗಿದ್ದು, ಕರೆ ಮಧ್ಯದಲ್ಲಿ ಸಂಪರ್ಕ ಕಡಿತಗೊಂಡರೂ ಸ್ವಯಂಚಾಲಿತವಾಗಿ ದೂರು ದಾಖಲಿಸಲು ಲಿಂಕ್ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕರ್ನಾಟಕವು ಸೈಬರ್ ವಂಚನೆಯಿಂದ ನಾಗರಿಕರ ದುಡಿಮೆ ಹಣವನ್ನು ರಕ್ಷಿಸುವಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದು, ಭವಿಷ್ಯದಲ್ಲಿ ಸೈಬರ್ ಅಪರಾಧಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಡೆಯಲು ಪೊಲೀಸ್ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಮತ್ತಷ್ಟು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.

How much money has been frozen in Karnataka in a cyber fraud case? – ತುಳು ಟೈಮ್ಸ್

ಇದನ್ನೂ ಓದಿ : ಕೆರೆಗಳಿಗೆ ವೈದ್ಯಕೀಯ ತ್ಯಾಜ್ಯ ಸುರಿದರೆ ಕ್ರಿಮಿನಲ್ ಕೇಸ್

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/iEAJAlB-lpg?feature=share

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 208

You cannot copy content of this page