ಕರ್ನಾಟಕ : Tulu Times l ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಿರಸ್ಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಭೂಮಿ ಪೂಜೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ವಿಜಯ್ ಈ ಪತ್ರ ಬರೆದಿದ್ದಾರೆ. ಇದೇ ವೇಳೆ ಅವರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಮಾನ್ಯಗೊಳಿಸಿದೆ ;
ದಶಕಗಳಷ್ಟು ಹಳೆಯದಾದ ಕಾವೇರಿ ನೀರಿನ ವಿವಾದದ ನಡುವೆ, ಕರ್ನಾಟಕ ಸರ್ಕಾರ ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಮೇಕೆದಾಟು ಪ್ರದೇಶದಲ್ಲಿ ಬ್ಯಾಲೆನ್ಸಿಂಗ್ ರಿಸರ್ವಾಯರ್ (ಸಮತೋಲನ ಜಲಾಶಯ) ನಿರ್ಮಿಸಲು ಯೋಜಿಸಿದೆ. ಆದರೆ ಇದು ಕಾವೇರಿ ಜಲ ವಿವಾದ ನ್ಯಾಯಮಂಡಳಿ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ವಿಜಯ್ ತಮ್ಮ ಪತ್ರದಲ್ಲಿ ವಾದಿಸಿದ್ದಾರೆ. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಕೂಡ ಮಾನ್ಯಗೊಳಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

2018ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕಾವೇರಿ ನದಿಯ ಮೇಲ್ದಂಡೆ ಭಾಗದಲ್ಲಿರುವ ರಾಜ್ಯಗಳು ಕೆಳಭಾಗದ ರಾಜ್ಯಗಳ ಅನುಮತಿ ಇಲ್ಲದೆ ಹೊಸ ಅಣೆಕಟ್ಟು ಅಥವಾ ಜಲಾಶಯಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಕರ್ನಾಟಕವು ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಒಪ್ಪಿಗೆ ಪಡೆಯಬೇಕಾಗಿದೆ ಎಂದು ವಿಜಯ್ ತಿಳಿಸಿದ್ದಾರೆ. ಮೇಕೆದಾಟು ಯೋಜನೆಗೆ ನ್ಯಾಯಮಂಡಳಿ ಅನುಮೋದನೆ ನೀಡಿದ ಯೋಜನೆಗಳ ಪಟ್ಟಿಯಲ್ಲಿ ಸ್ಥಾನವಿಲ್ಲ. ಕಾವೇರಿ ಕಣಿವೆ ಈಗಾಗಲೇ ನೀರಿನ ಕೊರತೆಯ ಪ್ರದೇಶವಾಗಿದ್ದು, ಲಭ್ಯವಿರುವ ನೀರನ್ನು ಸಂಬಂಧಿತ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದ ಹೊಸ ಜಲಾಶಯ ನಿರ್ಮಾಣವು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ, ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ಮೋದಿ ಅವರು ಕರ್ನಾಟಕ ಸರ್ಕಾರಕ್ಕೆ ಕೆಳಭಾಗದ ರಾಜ್ಯಗಳ ಒಪ್ಪಿಗೆ ಇಲ್ಲದೆ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಬೇಕು ಎಂದು ವಿಜಯ್ ಮನವಿ ಮಾಡಿದ್ದಾರೆ. ಇದೇ ವೇಳೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ. ಕಳೆದ ವಾರ ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಕೇಂದ್ರದ ಅನುಮೋದನೆ ದೊರೆತ ಬಳಿಕ ಭೂಮಿ ಪೂಜೆ ನೆರವೇರಿಸಲಾಗುವುದು ಎಂದೂ ತಿಳಿಸಿದ್ದಾರೆ. ತಮಿಳುನಾಡಿಗೆ 177 ಟಿಎಂಸಿ ನೀರು ಬಿಡುಗಡೆ ಮಾಡುವ ಸ್ಪಷ್ಟ ಆದೇಶವಿದೆ. ಮೇಕೆದಾಟು ಯೋಜನೆಗೆ ತಮಿಳುನಾಡಿಗೆ ವಿರೋಧ ವ್ಯಕ್ತಪಡಿಸುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದು ಕೇಂದ್ರ ಜಲ ಆಯೋಗದ ಕೆಲಸ, ಎಂದು ಶಿವಕುಮಾರ್ ಹೇಳಿದ್ದರು.
ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ತಮಿಳುನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷ ಡಿಎಂಕೆ ಅವರು, ಕಾವೇರಿ ನದಿಯ ಮೇಲಿನ ತಮಿಳುನಾಡಿನ ಹಕ್ಕುಗಳನ್ನು ತುಳಿಯುವ ರೀತಿಯ ಅಹಂಕಾರದ ಹೇಳಿಕೆ ಇದು ಎಂದು ಟೀಕಿಸಿದೆ. ಕರ್ನಾಟಕ ಉಪ ಮುಖ್ಯಮಂತ್ರಿಯ ಹೇಳಿಕೆಯನ್ನು ಮುಖ್ಯಮಂತ್ರಿ ವಿಜಯ್ ತೀವ್ರವಾಗಿ ಖಂಡಿಸಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣದ ಪ್ರಯತ್ನವನ್ನು ಆರಂಭದಲ್ಲೇ ತಡೆಯಬೇಕು, ಎಂದು ಡಿಎಂಕೆ ಆಗ್ರಹಿಸಿದೆ.
Tamil Nadu CM writes to PM Modi opposing Mekedatu dam – ತುಳು ಟೈಮ್ಸ್
ಇದನ್ನೂ ಓದಿ : ಎಲ್ಲರ ಕಷ್ಟದಲ್ಲಿ ಜೊತೆಯಾದವರು ಏಕೆ ಕೊನೆಯಲ್ಲಿ ಒಂಟಿಯಾಗುತ್ತಾರೆ?
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/live/4pEuD7fDOuo?si=NM0tBe15Cbzi85Bp











