ಕರ್ನಾಟಕ : Tulu Times l ಕನ್ನಡ ನಟಿ ಮತ್ತು ಫ್ಯಾಷನ್ ಪ್ರಭಾವಿ ದಿಶಾ ಮದನ್ ಅವರು 2026ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ (2026) ಭಾಗವಹಿಸಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಆಭರಣಗಳನ್ನು ಧರಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ದಿಶಾ ಮದನ್ ಧರಿಸಿದ್ದ ವಿಶೇಷ ಉಡುಪನ್ನು ಬೆಂಗಳೂರಿನ ಫ್ಯಾಷನ್ ಲೇಬಲ್ ನಿಹಾರಿಕಾ ವಿವೇಕ್ ವಿನ್ಯಾಸದಲ್ಲಿ ಎರಡು ಪುರಾತನ ಕೈಮಗ್ಗ ರೇಷ್ಮೆ ಸೀರೆಗಳನ್ನು ಮರುಬಳಕೆ ಮಾಡಿ ಈ ಕೌಚರ್ ಗೌನ್ ಸಿದ್ಧಪಡಿಸಲಾಗಿತ್ತು. ಬಣ್ಣಬಣ್ಣದ ನೇಯ್ಗೆ ವಿನ್ಯಾಸಗಳು ಹಾಗೂ ಚಿನ್ನದ ಜರಿ ಅಂಚುಗಳನ್ನು ಉಳಿಸಿಕೊಂಡೇ ಆಧುನಿಕ ಶೈಲಿಯಲ್ಲಿ ಈ ಉಡುಪನ್ನು ರೂಪಿಸಲಾಗಿತ್ತು.

ಈ ವಿನ್ಯಾಸಕ್ಕೆ ದಕ್ಷಿಣ ಭಾರತೀಯ ದೇವಾಲಯಗಳ ಶಿಲ್ಪಕಲೆ ಮತ್ತು ಸ್ತ್ರೀ ಶಕ್ತಿಯ ಚಿತ್ರಣವೇ ಪ್ರೇರಣೆಯಾಗಿತ್ತು. ಪಾರಂಪರಿಕ ಸೀರೆಗಳ ಮೂಲ ಗುರುತನ್ನು ಉಳಿಸಿಕೊಂಡೇ ಅವುಗಳನ್ನು ಆಧುನಿಕ ಫ್ಯಾಷನ್‌ಗೆ ಹೊಂದುವಂತೆ ಮರುರೂಪಿಸುವ ಪ್ರಯತ್ನ ಮಾಡಲಾಗಿದೆ. ಉಡುಪಿನಲ್ಲಿ ಬಂಜಾರಾ ಕಸೂತಿ ಎಂಬ ಸಾಂಪ್ರದಾಯಿಕ ಕಸೂತಿ ಕಲೆ ಬಳಸಲಾಗಿದ್ದು, ಮಹಿಳಾ ಕರಕುಶಲಗಾರ್ತಿಯರು 2,500ಕ್ಕೂ ಹೆಚ್ಚು ಗಂಟೆಗಳ ಕೈಕೆಲಸ ಮಾಡಿರುವುದು ವಿಶೇಷ.
ದಿಶಾ ಮದನ್ ಅವರ ಅಲಂಕಾರವೂ ದಕ್ಷಿಣ ಭಾರತೀಯ ಸಂಪ್ರದಾಯದ ಸೊಬಗನ್ನು ಪ್ರತಿಬಿಂಬಿಸಿತು. ಉದ್ದನೆಯ ಜಡೆಗೆ ಪಾರಂಪರಿಕ ಚೋಟಿ ಆಭರಣಗಳನ್ನು ಅಲಂಕರಿಸಲಾಗಿತ್ತು. ಕೆಂಪು ಹಾಗೂ ಹಸಿರು ಕಲ್ಲುಗಳಿಂದ ಅಲಂಕರಿಸಿದ ಚಿನ್ನದ ಆಭರಣಗಳು ಅವರ ಲುಕ್‌ಗೆ ರಾಜಮರ್ಯಾದೆಯ ಮೆರುಗು ನೀಡಿದವು.
ಇದರ ಜೊತೆಗೆ ಭಾರೀ ಚಿನ್ನದ ಹಾರ, ಜುಮ್ಕಾ ಕಿವಿಯೋಲೆಗಳು, ಇಯರ್ ಕಫ್‌ಗಳು, ಉಂಗುರಗಳು ಹಾಗೂ ಸೊಗಸಾದ ಮೂಗುತಿ ಅವರ ಉಡುಪಿಗೆ ಇನ್ನಷ್ಟು ವೈಭವ ತುಂಬಿದವು. ತಮ್ಮ ಉಡುಪಿನ ಬಗ್ಗೆ ಮಾತನಾಡಿದ ದಿಶಾ ಮದನ್, ನನಗೆ ಕಾನ್ಸ್ ಎಂದರೆ ಕೇವಲ ಫ್ಯಾಷನ್ ಅಲ್ಲ, ಅದು ಪ್ರತಿನಿಧಿತ್ವ. ದಕ್ಷಿಣ ಭಾರತೀಯ ಪರಂಪರೆ ಮತ್ತು ಕೈಗಾರಿಕಾ ಕಲೆಗಳಿಗೆ ಸಂಬಂಧಿಸಿದ ಉಡುಪು ಧರಿಸುವುದು ತುಂಬಾ ವಿಶೇಷ ಅನುಭವ. ಇತಿಹಾಸ ಹೊಂದಿರುವ ಪುರಾತನ ಸೀರೆಗಳನ್ನು ಜಾಗತಿಕ, ಆಧುನಿಕ ಮತ್ತು ಶಕ್ತಿಶಾಲಿ ವಿನ್ಯಾಸವಾಗಿ ರೂಪಿಸಿರುವುದು ನನಗೆ ಹೆಮ್ಮೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ತಮ್ಮ ಉಡುಗೆಯ ಬಗ್ಗೆ, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಕ್ಷಣಗಳ ವಿಡಿಯೊ ಶೇರ್ ಮಾಡಿದ್ದಾರೆ. ‘ಮತ್ತೊಮ್ಮೆ ಇದು ನನ್ನ ಕ್ಷಣ. 80 ವರ್ಷ ಹಳೆಯ ಎರಡು ವಿಂಟೇಜ್ ಸೀರೆಗಳನ್ನು ಒಂದೇ ಉಡುಪಿನಲ್ಲಿ ಬೆಸೆಯಲಾಗಿದೆ. ಭಾರತೀಯ ಜವಳಿಗಳ ಸಂರಕ್ಷಣೆಗೆ ವಿನ್ಯಾಸಗೊಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
Two 80-year-old vintage sarees in one outfit; Disha Madan – ತುಳುಟೈಮ್ಸ್
ಇದನ್ನೂ ಓದಿ :ಚಿನ್ನದ ಆಮದು ಮೇಲೆ ಕೇಂದ್ರದ ಕಟ್ಟುನಿಟ್ಟಿನ ನಿಯಮಗಳು: 100 ಕೆ.ಜಿ ಮಿತಿ, ಕಡ್ಡಾಯ ತಪಾಸಣೆ ಜಾರಿ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/4pEuD7fDOuo?si=nppNtMED1Ix8CFyE











