ಬೆಂಗಳೂರು : Tulu Times | ಬೆಂಗಳೂರಿನ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಪಾದಚಾರಿಗಳ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಪಾದಚಾರಿ ಮಾರ್ಗ ನೀತಿ ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇದರ ಜೊತೆಗೆ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸುವ ಪ್ರಸ್ತಾವವಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದು, ಸರ್ಕಾರ ನಿರ್ಮಿಸಿರುವ ಪಾದಚಾರಿ ಮಾರ್ಗಗಳು ವಾಹನಗಳ ನಿಲುಗಡೆ ಹಾಗೂ ವಿವಿಧ ವಾಣಿಜ್ಯ ಚಟುವಟಿಕೆಗಳಿಂದ ಅತಿಕ್ರಮಣಕ್ಕೊಳಗಾಗಿವೆ. ಇದರಿಂದ ಸಾರ್ವಜನಿಕರು ಸುರಕ್ಷಿತವಾಗಿ ನಡೆದು ಹೋಗಲು ತೊಂದರೆಯಾಗುತ್ತಿದೆ ಎಂದು ಹೇಳಿದರು.

ಹೊಸ ನೀತಿಯಡಿ ಪಾದಚಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಮೀಸಲಿಡಲಾಗುವುದು. ಜೊತೆಗೆ ಬೀದಿಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಅವರಿಗೆ ನಿಗದಿತ ವ್ಯಾಪಾರ ವಲಯಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಪಾದಚಾರಿ ಮಾರ್ಗಗಳು ಸ್ವಚ್ಛ ಮತ್ತು ಅಡೆತಡೆಯಿಲ್ಲದಂತೆ ಇರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ವ್ಯಾಪಾರ ಚಟುವಟಿಕೆಗಳು ಅನುಮೋದಿತ ಸ್ಥಳಗಳಲ್ಲಿ ಮಾತ್ರ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು. ಹಲವು ಬಾರಿ ಎಚ್ಚರಿಕೆ ನೀಡಿದರೂ ಅನಧಿಕೃತ ಫ್ಲೆಕ್ಸ್‌ಗಳು ಅಳವಡಿಕೆಯಾಗುತ್ತಲೇ ಇವೆ ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ರಾಜಕೀಯ ಪಕ್ಷಗಳವರೂ, ತಮ್ಮದೇ ಪಕ್ಷದವರೂ ಸಹ ಇದರಲ್ಲಿ ಭಾಗಿಯಾಗಿರುವುದಾಗಿ ಅವರು ಹೇಳಿದರು.
ಹೊಸ ನಿಯಮದ ಪ್ರಕಾರ, ಅನಧಿಕೃತ ಫ್ಲೆಕ್ಸ್‌ನ ಕೆಳಭಾಗದಲ್ಲಿ ಹೆಸರು ಮುದ್ರಿತವಾಗಿರುವ ವ್ಯಕ್ತಿಯನ್ನೇ ಹೊಣೆಗಾರರನ್ನಾಗಿ ಪರಿಗಣಿಸಿ, ಪ್ರತಿ ಫ್ಲೆಕ್ಸ್‌ಗೆ ₹50 ಸಾವಿರದಿಂದ ₹1 ಲಕ್ಷದವರೆಗೆ ದಂಡ ವಿಧಿಸುವ ವ್ಯವಸ್ಥೆ ಜಾರಿಯಾಗಲಿದೆ. ಕಾನೂನುಬದ್ಧ ಜಾಹೀರಾತುಗಳಿಗಾಗಿ ಸರ್ಕಾರ ಈಗಾಗಲೇ ಅಧಿಕೃತ ಜಾಹೀರಾತು ಫಲಕಗಳ ವ್ಯವಸ್ಥೆ ಕಲ್ಪಿಸಿದೆ. ಆದರೆ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಗೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹೊಸ ನೀತಿಯನ್ನು ಮುಂಬರುವ ತಿಂಗಳುಗಳಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗುವ ನಿರೀಕ್ಷೆಯಿದೆ.
curb for footpath encroachment; Heavy penalty for unauthorized flex – ತುಳು ಟೈಮ್ಸ್
ಇದನ್ನೂ ಓದಿ : ಸಾಮಾಜಿಕ ಜಾಲತಾಣದ ಆರೋಪ ; ಬದ್ರಿನಾಥ ದೇವಸ್ಥಾನದಲ್ಲೂ ತನಿಖೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/TP-rtIPAbk0?feature=share











