ಕರ್ನಾಟಕ : Tulu Times l ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯ ಸೀಗೇಹಳ್ಳಿಯ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ತ್ರಿವಳಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪೊಲೀಸ್ ವಿಚಾರಣೆಯಲ್ಲಿ ಆರೋಪಿ ಕೆನ್ನೆತ್ ಮೂರು ಕೊಲೆಗಳನ್ನು ತಾನೇ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಕುಟುಂಬದೊಳಗಿನ ಹಣಕಾಸಿನ ವಿವಾದವೇ ಈ ಕೃತ್ಯಕ್ಕೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶ್ವೇತಾ ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಸುಮಾರು ₹30 ಲಕ್ಷ ಸಾಲ ಪಡೆದಿದ್ದರೂ ಅದರ ಇಎಂಐ ಪಾವತಿಸುತ್ತಿರಲಿಲ್ಲ. ಅಲ್ಲದೆ, ತಾನು ಗಳಿಸಿದ್ದ ಸುಮಾರು ₹8 ಲಕ್ಷ ಹಣವನ್ನು ಕೆನ್ನೆತ್‌ಗೆ ನೀಡಿದ್ದಳು. ಹಣವನ್ನು ಮರಳಿ ನೀಡುವಂತೆ ಕುಟುಂಬದವರು ನಿರಂತರ ಒತ್ತಡ ಹೇರಿದ್ದರಿಂದ ಇಬ್ಬರೂ ಕೊಲೆ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರಂಭದಲ್ಲಿ ಶ್ವೇತಾ ತನ್ನ ತಂದೆ-ತಾಯಿಯನ್ನು ಮಾತ್ರ ಕೊಲ್ಲುವ ಯೋಜನೆ ಇತ್ತು ಎಂದು ಹೇಳಲಾಗಿದೆ. ಆದರೆ, ಕಿರಿಯ ಸಹೋದರಿ ಸುಪ್ರಿಯಾ ಅಕಸ್ಮಾತ್ ಮನೆಗೆ ಬಂದಿದ್ದರಿಂದ ಆಕೆಯೂ ಹತ್ಯೆಗೆ ಬಲಿಯಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಇಬ್ಬರೂ ಎರಡು ಬಾರಿ ಮಾಡಿದ್ದರೂ ಅವಕಾಶ ಸಿಗದೆ ವಿಫಲರಾಗಿದ್ದರು ಎನ್ನಲಾಗಿದೆ. ಪ್ರಕರಣದ ತನಿಖೆಯಲ್ಲಿ ಆರೋಪಿಗಳು ಕೊಲೆಗೂ ಮುನ್ನ ಗೂಗಲ್‌ನಲ್ಲಿ ಹಲವು ವಿಷಯಗಳನ್ನು ಹುಡುಕಿರುವುದು ಬೆಳಕಿಗೆ ಬಂದಿದೆ. ಅವುಗಳಲ್ಲಿ ಪ್ರಮುಖವಾಗಿ:
ವ್ಯಕ್ತಿಯನ್ನು ಹೇಗೆ ಕೊಲ್ಲುವುದು?
ಯಾವ ಆಯುಧ ಬಳಸಿದರೆ ಸುಲಭ?
ಚಾಕುವಿನಿಂದ ಎಷ್ಟು ಬಲವಾಗಿ ಇರಿಯಬೇಕು?
ಎಷ್ಟು ರಕ್ತಸ್ರಾವವಾದರೆ ಸಾವು ಸಂಭವಿಸುತ್ತದೆ?
ಕೊಲೆ ಬಳಿಕ ಏನು ಮಾಡಬೇಕು, ಏನು ಮಾಡಬಾರದು?
ಪೊಲೀಸರು ಆರೋಪಿಗಳನ್ನು ಹೇಗೆ ಪತ್ತೆಹಚ್ಚುತ್ತಾರೆ?
ಬಂಧನಕ್ಕೆ ಕಾರಣವಾಗುವ ಸಾಮಾನ್ಯ ತಪ್ಪುಗಳು ಯಾವುವು?
ಕೊಲೆ ಬಳಿಕ ಮೊಬೈಲ್ ಬಳಸಬೇಕೇ?
ಟೋಲ್ ರಸ್ತೆಗಳು, ಸಾರ್ವಜನಿಕ ಸಾರಿಗೆಯನ್ನು ತಪ್ಪಿಸಬೇಕೇ?
ಎಟಿಎಂ ಅಥವಾ ಆನ್‌ಲೈನ್ ಹಣ ವರ್ಗಾವಣೆಯನ್ನು ಬಳಸಬಾರದೇ?
ಒಬ್ಬರು ಮೊದಲು ಸಿಕ್ಕಿಬಿದ್ದರೆ ಪೊಲೀಸರಿಗೆ ಏನು ಹೇಳಬೇಕು?
ವಿಚಾರಣೆಯಲ್ಲಿ ಪೊಲೀಸರನ್ನು ಹೇಗೆ ದಾರಿ ತಪ್ಪಿಸಬೇಕು?
ಪೊಲೀಸರ ಪ್ರಕಾರ, ಆರೋಪಿಗಳು ಬೈಕ್‌ನಲ್ಲಿ ಸರ್ವಿಸ್ ರಸ್ತೆಗಳ ಮೂಲಕ ಬೆಂಗಳೂರಿನಿಂದ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಟೋಲ್‌ಗೇಟ್, ಹೆದ್ದಾರಿ, ಮೊಬೈಲ್ ಬಳಕೆ, ಸಾರ್ವಜನಿಕ ಸಾರಿಗೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ತಪ್ಪಿಸುವಂತೆ ಮುಂಚಿತವಾಗಿಯೇ ನಿರ್ಧರಿಸಿದ್ದರು. ಇದಲ್ಲದೆ, ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರೆ ಏನು ಉತ್ತರಿಸಬೇಕು ಎಂಬುದನ್ನೂ ಮೊದಲೇ ಚರ್ಚಿಸಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆರಂಭದಲ್ಲಿ ಶ್ವೇತಾ ತಾನೊಬ್ಬಳೇ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಶ್ವೇತಾ ತನ್ನ ಹೇಳಿಕೆಯನ್ನು ಬದಲಾಯಿಸಿದ್ದು, ಕೆನ್ನೆತ್ ಒಬ್ಬನೇ ಮೂರು ಕೊಲೆಗಳನ್ನು ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ. ತಾನು ಯಾರಿಗೂ ಚಾಕು ಇರಿದಿಲ್ಲ, ಕೇವಲ ನಂತರ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾಳೆ. ಆದರೆ, ಶ್ವೇತಾಳ ಹೇಳಿಕೆ ಹಲವು ಬಾರಿ ಬದಲಾಗಿರುವುದರಿಂದ, ಪೊಲೀಸರು ಯಾವುದೇ ತೀರ್ಮಾನಕ್ಕೆ ಬರದೆ ಸಾಕ್ಷ್ಯಗಳು, ಫೊರೆನ್ಸಿಕ್ ವರದಿ, ಸಿಸಿಟಿವಿ ದೃಶ್ಯಗಳು ಹಾಗೂ ವೈಜ್ಞಾನಿಕ ಪರೀಕ್ಷೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅಂತಿಮ ಸತ್ಯಾಂಶವು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಮಾತ್ರ ದೃಢವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Google search before murder, then triple murder: Shocking truth – ತುಳುಟೈಮ್ಸ್
ಇದನ್ನೂ ಓದಿ :ನಾಳೆಯಿಂದ ಮನೆ ಬಾಗಿಲಿಗೆ ಬಿಎಲ್‌ಒ; ಮತದಾರರ ಪರಿಶೀಲನೆ ಆರಂಭ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/DA3LOk_-2ik











