ಬೆಂಗಳೂರು: Tulu Times l ಯುವಜನರಲ್ಲಿ ಹೆಚ್ಚುತ್ತಿರುವ ಎಚ್‌ಐವಿ ಸೋಂಕು ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಪದವಿ ಹಾಗೂ ವಿಟಿಯು ಅಂಗಸಂಸ್ಥೆಯ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಬಿರಗಳ ಮೂಲಕ ಕಡ್ಡಾಯ ಹೆಚ್ಐವಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಈ ಅಭಿಯಾನದ ಮುಖ್ಯ ಉದ್ದೇಶ ಸೋಂಕನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ತಕ್ಷಣ ಚಿಕಿತ್ಸೆ ಒದಗಿಸುವುದು, ಸಮಾಲೋಚನೆ (ಕೌನ್ಸೆಲಿಂಗ್) ನೀಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಯುವಜನರಲ್ಲಿ ಸೋಂಕು ಹೆಚ್ಚಳ ಆತಂಕ ;
ಕರ್ನಾಟಕದಲ್ಲಿ ದೇಶದಲ್ಲೇ ಮೂರನೇ ಅತಿ ಹೆಚ್ಚು ಹೆಚ್ಐವಿ ಸೋಂಕಿತರು ಇದ್ದಾರೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಮಂದಿ ಹೆಚ್ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ, ಇವರಲ್ಲಿ 2.05 ಲಕ್ಷ ಮಂದಿ ಆಂಟಿ-ರೆಟ್ರೋವೈರಲ್ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, 18 ರಿಂದ 35 ವರ್ಷ ವಯಸ್ಸಿನವರಲ್ಲಿ ಹೊಸ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ 18 ರಿಂದ 25 ವರ್ಷದೊಳಗಿನ ಸುಮಾರು 7,000 ಯುವಕರಲ್ಲಿ ಹೆಚ್ಐವಿ ಸೋಂಕು ಪತ್ತೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ ಸುಮಾರು 54,000 ಜನರಿಗೆ ತಮಗೆ ಸೋಂಕು ಇರುವುದೇ ಗೊತ್ತಿಲ್ಲ ಎಂಬ ಅಂದಾಜಿದೆ.
ಕ್ಯುಆರ್ ಕೋಡ್ ಮೂಲಕ ಗೌಪ್ಯತೆ ;
ವಿದ್ಯಾರ್ಥಿಗಳ ಗೌಪ್ಯತೆ ಕಾಪಾಡಲು ಆರೋಗ್ಯ ಇಲಾಖೆ “Know Your HIV Status” ಎಂಬ QR ಕೋಡ್ ಆಧಾರಿತ ವ್ಯವಸ್ಥೆ ಜಾರಿಗೊಳಿಸಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ವರದಿಯನ್ನು QR ಕೋಡ್ ಸ್ಕ್ಯಾನ್ ಮಾಡಿ ಸ್ವತಃ ವೀಕ್ಷಿಸಬಹುದಾಗಿದ್ದು, ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗುತ್ತದೆ.

ಒಟ್ಟು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆರೋಗ್ಯ ಶಿಬಿರಗಳ ಮೂಲಕ ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ. ಪರೀಕ್ಷೆಯ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಐವಿ ತಡೆಗಟ್ಟುವಿಕೆ, ಸುರಕ್ಷಿತ ಆರೋಗ್ಯ ಅಭ್ಯಾಸಗಳು ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಬೀದಿ ನಾಟಕ, ರಸಪ್ರಶ್ನೆ, ಅರಿವು ಕಾರ್ಯಕ್ರಮಗಳು ಹಾಗೂ ಕೌನ್ಸೆಲಿಂಗ್ ಶಿಬಿರಗಳನ್ನು ಮುಂದಿನ ವರ್ಷದ ಫೆಬ್ರವರಿವರೆಗೆ ಆಯೋಜಿಸಲಾಗುತ್ತದೆ. ಈ ಅಭಿಯಾನವು ಯುವಜನರಲ್ಲಿ ಹೆಚ್ಐವಿ ಸೋಂಕನ್ನು ಆರಂಭದಲ್ಲೇ ಪತ್ತೆಹಚ್ಚಿ, ತ್ವರಿತ ಚಿಕಿತ್ಸೆ ನೀಡುವ ಜೊತೆಗೆ ಸಮಾಜದಲ್ಲಿರುವ ಹೆಚ್ಐವಿ ಕುರಿತ ಕಳಂಕ (ಸ್ಟಿಗ್ಮಾ) ನಿವಾರಿಸುವ ಉದ್ದೇಶ ಹೊಂದಿದೆ.
Mandatory HIV testing in colleges; QR code system for student privacy – ತುಳುಟೈಮ್ಸ್
ಇದನ್ನೂ ಓದಿ :ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಿದ್ದರಾಮಯ್ಯ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/cALYARNRG54?si=yIwXW370O6gure2Q











