ಕರ್ನಾಟಕ : Tulu Times l ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ ಆನ್‌ಲೈನ್ ಆಡಳಿತಾತ್ಮಕ ಕೆಲಸಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಹಲವು ಮಾಹಿತಿಗಳನ್ನು ನಿಗದಿತ ಸಮಯದೊಳಗೆ ಆನ್‌ಲೈನ್‌ನಲ್ಲಿ ದಾಖಲಿಸುವ ಅನಿವಾರ್ಯತೆಯಿಂದ ವಿದ್ಯಾರ್ಥಿಗಳಿಗೆ ಬೋಧನೆಗೆ ಮೀಸಲಿಡುವ ಸಮಯ ಕಡಿಮೆಯಾಗುತ್ತಿದೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರು ಪ್ರತಿದಿನ ವಿದ್ಯಾರ್ಥಿಗಳ ಹಾಜರಾತಿ, ಮಧ್ಯಾಹ್ನದ ಊಟ ಯೋಜನೆಯ ವಿವರಗಳು, ನಿರಂತರ ಸಮಗ್ರ ಮೌಲ್ಯಮಾಪನ ಮಾಹಿತಿ, ದಾಸ್ತಾನು ನೋಂದಣಿ, ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆಯ ದಾಖಲೆ, ವಿವಿಧ ವರದಿಗಳು ಹಾಗೂ ಆನ್‌ಲೈನ್ ಸಭೆಗಳಲ್ಲಿ ಭಾಗವಹಿಸುವುದು ಸೇರಿದಂತೆ ಹಲವು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಬೇಕಾಗಿದೆ. ಇದರಿಂದ ಶಾಲಾ ವೇಳೆಯಲ್ಲೇ ಶಿಕ್ಷಕರು ಮೊಬೈಲ್ ಅಥವಾ ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯಬೇಕಾಗಿ ಬರುತ್ತಿದ್ದು, ವಿದ್ಯಾರ್ಥಿಗಳೊಂದಿಗೆ ಪಾಠ ನಡೆಸುವ ಸಮಯ ಗಣನೀಯವಾಗಿ ಕಡಿಮೆಯಾಗುತ್ತಿದೆ.
ಗ್ರಾಮೀಣ ಪ್ರದೇಶಗಳ ಅನೇಕ ಸರ್ಕಾರಿ ಶಾಲೆಗಳಲ್ಲಿ ಸ್ಥಿರ ಇಂಟರ್‌ನೆಟ್ ಸೌಲಭ್ಯವಿಲ್ಲ. ಹೀಗಾಗಿ ಶಿಕ್ಷಕರು ತಮ್ಮ ವೈಯಕ್ತಿಕ ಮೊಬೈಲ್ ಮತ್ತು ಡೇಟಾ ಬಳಸಿ ಸರ್ಕಾರಿ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿದೆ. ಕೆಲವೆಡೆ ಮೊಬೈಲ್ ಸಿಗ್ನಲ್‌ಗಾಗಿ ಶಾಲಾ ಆವರಣದಲ್ಲೇ ಅಲೆದಾಡಬೇಕಾದ ಪರಿಸ್ಥಿತಿಯೂ ಇದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಹಲವು ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಇಲ್ಲದ ಕಾರಣ ಎಲ್ಲ ದಾಖಲೆಗಳನ್ನು ಮೊಬೈಲ್‌ನಲ್ಲೇ ನಮೂದಿಸಬೇಕಾಗಿದೆ. ಇದರಿಂದ ದೀರ್ಘಕಾಲ ಮೊಬೈಲ್ ಬಳಕೆಯಿಂದ ಕಣ್ಣಿನ ನೋವು, ತಲೆನೋವು, ಕುತ್ತಿಗೆ ಹಾಗೂ ಬೆನ್ನುನೋವಿನಂತಹ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ.
ಶಿಕ್ಷಕರೊಬ್ಬರ ಪ್ರಕಾರ, ಬೆಳಗ್ಗೆ ಎಐ ಆಧಾರಿತ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಫೋಟೋ ದಾಖಲಿಸಲು ಸುಮಾರು 15 ನಿಮಿಷ ಬೇಕಾಗುತ್ತದೆ. ನಂತರ ಮೊಟ್ಟೆ, ಬಾಳೆಹಣ್ಣು, ಹಾಜರಾತಿ ಹಾಗೂ ಇತರ ಮಾಹಿತಿಗಳನ್ನು ದಾಖಲಿಸಲು ಇನ್ನೂ 15 ನಿಮಿಷ ಕಳೆಯುತ್ತದೆ. ಹೀಗಾಗಿ 40 ನಿಮಿಷದ ಒಂದು ತರಗತಿಯಲ್ಲಿ ಕೇವಲ 10 ನಿಮಿಷ ಮಾತ್ರ ಬೋಧನೆಗೆ ಉಳಿಯುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನದ ಊಟದ ಬಳಿಕವೂ ಇದೇ ರೀತಿಯ ಮಾಹಿತಿ ದಾಖಲಿಸುವ ಕೆಲಸ ಇರುವುದರಿಂದ ಬೋಧನಾ ಸಮಯ ಮತ್ತಷ್ಟು ಕಡಿಮೆಯಾಗುತ್ತಿದೆ.
ಆನ್‌ಲೈನ್ ಆಡಳಿತಾತ್ಮಕ ಕೆಲಸದ ಒತ್ತಡವನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ನೀಡಲು ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಕರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ಸರ್ಕಾರಿ ಶಾಲೆಗೆ ಕನಿಷ್ಠ ಒಂದು ಕಂಪ್ಯೂಟರ್ ಒದಗಿಸಬೇಕು. ಶಾಶ್ವತ ಇಂಟರ್‌ನೆಟ್ ಸಂಪರ್ಕ ಕಲ್ಪಿಸಬೇಕು. ಆನ್‌ಲೈನ್ ದಾಖಲೆಗಳ ನಿರ್ವಹಣೆಗಾಗಿ ಪ್ರತಿ ಶಾಲೆಗೆ ಪ್ರತ್ಯೇಕ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಜವಾಬ್ದಾರಿಗಳು ಮುಖ್ಯಶಿಕ್ಷಕರ ಕರ್ತವ್ಯದ ಭಾಗವಾಗಿದ್ದು, ಅಗತ್ಯವಿದ್ದಲ್ಲಿ ಇತರ ಶಿಕ್ಷಕರಿಗೂ ಹಂಚಲಾಗುತ್ತದೆ. ಈ ಸಂಬಂಧ ಯಾವುದೇ ನೀತಿ ಬದಲಾವಣೆ ಮಾಡಬೇಕಾದರೆ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
Teachers overwhelmed by paperwork; students’ learning suffers – ತುಳುಟೈಮ್ಸ್
ಇದನ್ನೂ ಓದಿ :ನಂದಿನಿ ಹಾಲಿನ ವಿರುದ್ಧ ರೀಲ್ಸ್: ವೈದ್ಯೆಗೆ ಹೈಕೋರ್ಟ್‌ನಿಂದ ಖಡಕ್ ಎಚ್ಚರಿಕೆ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/BIxaB8iCDsE?feature=share











