ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಡಾಬರ್‌ನ ಹಲವು ಉತ್ಪನ್ನಗಳ ಮಾರಾಟಕ್ಕೆ ತಡೆ

ನವದೆಹಲಿ: Tulu Times l ಆಹಾರ ಉತ್ಪನ್ನಗಳ ಮೇಲಿನ ‘100% Pure’, ‘100% Natural’, ‘100% Organic’ ಎಂಬ ಜಾಹೀರಾತುಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ಡಾಬರ್ ಇಂಡಿಯಾ ಲಿಮಿಟೆಡ್‌ನ ಕೆಲವು ಉತ್ಪನ್ನಗಳ ಮಾರಾಟಕ್ಕೆ ತಡೆ ವಿಧಿಸಿದೆ. ಎಫ್‌ಎಸ್‌ಎಸ್‌ಎಐ ಆದೇಶದ ಪ್ರಕಾರ, ಜೇನುತುಪ್ಪ, ಆಪಲ್ ಸೈಡರ್ ವಿನೆಗರ್, ವರ್ಜಿನ್ ತೆಂಗಿನೆಣ್ಣೆ, ಎಳ್ಳೆಣ್ಣೆ, ಹಸುವಿನ ತುಪ್ಪ, ತೆಂಗಿನ ನೀರು ಹಾಗೂ ತೆಂಗಿನ ಹಾಲು ಸೇರಿದಂತೆ ಹಲವು ಉತ್ಪನ್ನಗಳನ್ನು ‘100% ಶುದ್ಧ’, ‘100% ನೈಸರ್ಗಿಕ’, ‘100% ಸಾವಯವ’, ‘100% Purity Guaranteed’ ಎಂಬ ಹೇಳಿಕೆಗಳೊಂದಿಗೆ ಮಾರುಕಟ್ಟೆಗಿಳಿಸಲಾಗಿತ್ತು. ಆದರೆ ಇಂತಹ ಸಂಪೂರ್ಣ  ದಾವೆಗಳನ್ನು ವೈಜ್ಞಾನಿಕವಾಗಿ ದೃಢೀಕರಿಸಲು ಸಾಧ್ಯವಿಲ್ಲ ಮತ್ತು ಅವು 2018ರ ಆಹಾರ ಜಾಹೀರಾತು ಮತ್ತು ದಾವೆಗಳ ನಿಯಮಾವಳಿಗೆ ವಿರುದ್ಧವಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ.

ಇದಲ್ಲದೆ, ಡಾಬರ್ ಹಿಮಾಲಯನ್ ಆರ್ಗ್ಯಾನಿಕ್ ಆಪಲ್ ಸೈಡರ್ ವಿನೆಗರ್ ಹಾಗೂ ಡಾಬರ್ ಆರ್ಗ್ಯಾನಿಕ್ ಹನಿ ಉತ್ಪನ್ನಗಳ ಮೇಲೆ ಅಗತ್ಯ ಅನುಮೋದನೆ ಇಲ್ಲದೆ ‘ಜೈವಿಕ್ ಭಾರತ್’ ಲೋಗೋ ಬಳಸಿರುವುದು 2017ರ ಸಾವಯವ ಆಹಾರ ನಿಯಮಗಳ ಉಲ್ಲಂಘನೆ ಎಂದು ಎಫ್‌ಎಸ್‌ಎಸ್‌ಎಐ ಹೇಳಿದೆ. ಹಾಗೆಯೇ ಡಾಬರ್ ಹೋಮ್‌ಮೇಡ್ ತೆಂಗಿನ ಹಾಲು ಉತ್ಪನ್ನಕ್ಕೆ ನೀಡಿದ್ದ ‘100% Purity’ ಎಂಬ ದಾವೆಯೂ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಈ ರೀತಿಯ ‘100%’ ದಾವೆಗಳನ್ನು ಕೈಬಿಡುವಂತೆ ಈ ಹಿಂದೆಯೇ ಡಾಬರ್‌ಗೆ ಸೂಚನೆ ನೀಡಲಾಗಿತ್ತು. ಆದರೆ ಸಮರ್ಪಕ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಎಫ್‌ಎಸ್‌ಎಸ್‌ಎಐ ಆದೇಶಿಸಿದೆ. ಜೊತೆಗೆ ಕೈಗೊಂಡ ಕ್ರಮಗಳ ಕುರಿತು 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾಬರ್ ಇಂಡಿಯಾ, ಎಫ್‌ಎಸ್‌ಎಸ್‌ಎಐ ಆದೇಶವನ್ನು ವಿವರವಾಗಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕಂಪನಿಯು ಎಲ್ಲಾ ಅನ್ವಯವಾಗುವ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದ್ದು, ಅಗತ್ಯವಿದ್ದರೆ ಉತ್ಪನ್ನಗಳ ಲೇಬಲಿಂಗ್‌ ಅನ್ನು ಮರುಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದೆ.

Sale of several Dabur products halted – ತುಳುಟೈಮ್ಸ್

ಇದನ್ನೂ ಓದಿ :ಸುಳ್ಯ ಯುವಜನ ಸಂಯುಕ್ತ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನ

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 210

You cannot copy content of this page