ಬೆಂಗಳೂರು : Tulu Times l ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪೂಜೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸೆಪ್ಟೆಂಬರ್ 14ರಂದು ನಡೆಯಲಿರುವ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ಆಚರಿಸುವ ಕುರಿತು ಪುತ್ತಣ್ಣ ಚೆಟ್ಟಿ ಟೌನ್ ಹಾಲ್‌ನಲ್ಲಿ ಜಿಬಿಎ ಮತ್ತು ಬೆಂಗಳೂರು ನಗರ ಪೊಲೀಸ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ‘ಶಾಂತಿ ಮತ್ತು ಸೌಹಾರ್ದತೆ’ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಕಾರಣದಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನು ನಿಷೇಧಿಸಿದೆ. ಹೀಗಾಗಿ ಸಾರ್ವಜನಿಕರು ಈ ಬಾರಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಎಂದು ಮಹೇಶ್ವರ್ ರಾವ್ ಮನವಿ ಮಾಡಿದರು.
ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಅಗತ್ಯವಿರುವೆಡೆ ದುರಸ್ತಿ ಕಾರ್ಯ ನಡೆಸಲಾಗುವುದು. ಕೆರೆಗಳ ಸಮೀಪದ ನಿಗದಿತ ವಿಸರ್ಜನಾ ಸ್ಥಳಗಳು ಮತ್ತು ತಾತ್ಕಾಲಿಕ ಟ್ಯಾಂಕ್‌ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ತಡವಾಗಿ ಬರುವ ಭಕ್ತರಿಗೂ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.
ಕೆರೆಗಳ ಹೊರತಾದ ಸ್ಥಳಗಳಲ್ಲಿ ವಿಸರ್ಜನಾ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಬಂದರೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿಯೂ ಅವರು ಹೇಳಿದರು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳ ಉಪವಿಭಾಗ ಕಚೇರಿಗಳಲ್ಲಿ ಸಿಂಗಲ್-ವಿಂಡೋ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇಲ್ಲಿ ನಗರ ನಿಗಮ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ಇರಲಿದ್ದಾರೆ.

ಗಣೇಶೋತ್ಸವ ಮೆರವಣಿಗೆಗಳು ನಿಗದಿತ ಸಮಯಕ್ಕೆ ಆರಂಭವಾಗಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದರು. ಸಂಚಾರ ದಟ್ಟಣೆ ತಪ್ಪಿಸಲು ಮೆರವಣಿಗೆ ಮಾರ್ಗ ಹಾಗೂ ಸಮಯಕ್ಕೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸುವ ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
No entry for POP Ganesha idols; only eco-friendly idols allowed – ತುಳುಟೈಮ್ಸ್
ಇದನ್ನೂ ಓದಿ :ಫಾರ್ಚೂನ್ ಸೋಯಾಬೀನ್ ಎಣ್ಣೆಗೆ ಸಂಕಷ್ಟ
===
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/EAlZlYPZOZI











