ಬೆಂಗಳೂರು : Tulu Times l ರಾಜ್ಯದ ಬಸ್ ಪ್ರಯಾಣಿಕರಿಗೆ ದಸರಾ ಉಡುಗೊರೆಯಾಗಿ ಕರ್ನಾಟಕ ಸರ್ಕಾರವು ಹೊಸ ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲದೆ ವಾಟ್ಸಾಪ್ ಮೂಲಕವೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ.
ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಪರಿಚಯಿಸಲಾಗಿದೆ. ಇದರ ಜೊತೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಿಗೆ ವಾಟ್ಸಾಪ್ ಮೂಲಕ ಟಿಕೆಟ್ ಕಾಯ್ದಿರಿಸುವ ಸೌಲಭ್ಯವನ್ನು ಆರಂಭಿಸಲಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೀಕರಿಸಿದ ‘KSRTC ಅವತಾರ್ 2.0’ ಮೊಬೈಲ್ ಆ್ಯಪ್ ಹಾಗೂ ವಾಟ್ಸ್ಆ್ಯಪ್ ಟಿಕೆಟ್ ಸೇವೆಗೆ ಚಾಲನೆ ನೀಡಿದರು.

ಹೊಸ ಮೊಬಿಲಿಟಿ ಆ್ಯಪ್ನಲ್ಲಿ ಪ್ರಯಾಣಿಕರು ತಮ್ಮ ಹಿಂದಿನ ಟಿಕೆಟ್ ಬುಕ್ಕಿಂಗ್ಗಳ ವಿವರಗಳನ್ನು ವೀಕ್ಷಿಸಬಹುದು. ವಹಿವಾಟುಗಳನ್ನು ನಿರ್ವಹಿಸುವುದರ ಜೊತೆಗೆ ನಾಲ್ಕೂ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಬಹುದು. ದೂರುಗಳ ಸ್ಥಿತಿಯನ್ನು ಪರಿಶೀಲಿಸುವುದು, ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸುವುದು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸೌಲಭ್ಯವೂ ಇರಲಿದೆ. ಇದಲ್ಲದೆ, ಹಂತ ಹಂತವಾಗಿ ಡಿಜಿಟಲ್ ಮಾಸಿಕ ಪಾಸ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗುತ್ತದೆ. ಪ್ರಯಾಣಿಕರು ಆನ್ಲೈನ್ ಮೂಲಕ ಬಸ್ ಪಾಸ್ಗಳನ್ನು ಬುಕ್ ಮಾಡಿ, ಸ್ವೀಕರಿಸಿ ಹಾಗೂ ನಿರ್ವಹಿಸಬಹುದಾಗಿದೆ. ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ. ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು +91 6364940880 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಬಳಿಕ ಸಂವಾದಾತ್ಮಕ ವ್ಯವಸ್ಥೆಯು ಹಂತ ಹಂತವಾಗಿ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ. ಬುಕ್ ಮಾಡಿದ ಟಿಕೆಟ್ಗಳನ್ನು ಇದೇ ಸಂಖ್ಯೆಯ ಮೂಲಕ ರದ್ದುಪಡಿಸುವ ಸೌಲಭ್ಯವೂ ಇದೆ. ಇದಕ್ಕಾಗಿ ‘Ticket Cancellation’ ಆಯ್ಕೆಯನ್ನು ಆರಿಸಿ, ಬುಕ್ಕಿಂಗ್ ವೇಳೆ ದೊರೆತ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಟ್ರಾನ್ಸಾಕ್ಷನ್ ಪಾಸ್ವರ್ಡ್ ನಮೂದಿಸಬೇಕು.
Dasara Gift: Book KSRTC bus tickets via WhatsApp. – ತುಳು ಟೈಮ್ಸ್
ಇದನ್ನೂ ಓದಿ : ಇಯರ್ಬಡ್ಸ್ ಬಳಕೆಗೂ ಇದೆ ಲಿಮಿಟ್; ಈ ನಿಯಮ ಪಾಲಿಸಿ!
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtu.be/5C4rFNGDf_w











