ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮಕ್ಕಳ ಆರೋಗ್ಯಕ್ಕೆ ಮಹತ್ವದ ದಿನ; ಜಂತುಹುಳು ನಿವಾರಣೆಗೆ ಉಚಿತ ಮಾತ್ರೆ

ಆರೋಗ್ಯ : Tulu Times l ಮಕ್ಕಳಲ್ಲಿ ಜಂತುಹುಳು ಸೋಂಕು ತಡೆಗಟ್ಟುವ ಉದ್ದೇಶದಿಂದ ಆಗಸ್ಟ್ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಗಳನ್ನು ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.

ಜಂತುಹುಳು ಸೋಂಕಿನಿಂದ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ ಹಾಗೂ ದೈಹಿಕ ದೌರ್ಬಲ್ಯ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೋಂಕು ದೀರ್ಘಕಾಲ ಮುಂದುವರಿದರೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ನಿಯಮಿತವಾಗಿ ಜಂತುಹುಳು ನಿವಾರಣೆಗೆ ಕ್ರಮ ಕೈಗೊಳ್ಳುವುದು ಹಾಗೂ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಮಾತ್ರೆ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ಆಗಸ್ಟ್ 17ರಂದು ಮಾಪ್-ಅಪ್ ದಿನದಂದು ಮಾತ್ರೆ ನೀಡಲಾಗುತ್ತದೆ. ಶಾಲೆಗೆ ದಾಖಲಾಗಿರುವ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಜಂತುಹುಳು ನಾಶಕ ಮಾತ್ರೆ ನೀಡುವ ವ್ಯವಸ್ಥೆ ಮಾಡಲಾಗಿದೆ.

ಜಂತುಹುಳು ಸೋಂಕಿನಿಂದ ರಕ್ಷಿಸಿಕೊಳ್ಳಲು ಮಕ್ಕಳು ಉಗುರುಗಳನ್ನು ಚಿಕ್ಕದಾಗಿ ಮತ್ತು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಆಹಾರ ಸೇವಿಸುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಶುದ್ಧ ಕುಡಿಯುವ ನೀರನ್ನು ಬಳಸುವುದು, ಹಣ್ಣು–ತರಕಾರಿಗಳನ್ನು ಚೆನ್ನಾಗಿ ತೊಳೆದು ಸೇವಿಸುವುದು ಹಾಗೂ ಆಹಾರವನ್ನು ಮುಚ್ಚಿಡುವುದು ಮುಖ್ಯ. ಹೊರಗೆ ಹೋಗುವಾಗ ಚಪ್ಪಲಿ ಧರಿಸುವುದು ಮತ್ತು ಬಯಲಿನಲ್ಲಿ ಮಲವಿಸರ್ಜನೆ ಮಾಡದೆ ಶೌಚಾಲಯ ಬಳಸುವುದು ಸಹ ಅಗತ್ಯ.

ಜಂತುಹುಳು ನಾಶಕ ಮಾತ್ರೆಯನ್ನು ಆರೋಗ್ಯ ಕಾರ್ಯಕರ್ತರ ಸಲಹೆಯಂತೆ ಅಗಿದು ನುಂಗಬೇಕು. ಮಾತ್ರೆ ಸೇವಿಸಿದ ಬಳಿಕ ಕೆಲ ಮಕ್ಕಳಲ್ಲಿ ವಾಕರಿಕೆ, ಸ್ವಲ್ಪ ಹೊಟ್ಟೆನೋವು, ವಾಂತಿ, ಅತಿಸಾರ ಅಥವಾ ಬಳಲಿಕೆಯಂತಹ ಸಣ್ಣ ಪ್ರಮಾಣದ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಯಾವುದೇ ತೊಂದರೆ ಕಂಡುಬಂದರೆ 104 ಉಚಿತ ಆರೋಗ್ಯ ಸಹಾಯವಾಣಿಗೆ ಕರೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಿಎಚ್‌ಸಿ, ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

An important day for children’s health; free deworming tablets – ತುಳುಟೈಮ್ಸ್

ಇದನ್ನೂ ಓದಿ :ಹಬ್ಬದ ಸಂಭ್ರಮಕ್ಕೆ ಶಾಪಿಂಗ್ ಧಮಾಕಾ; ಸಫಲ ಉದ್ಯಮದಲ್ಲಿ ಭರ್ಜರಿ ಆಫರ್

===

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್  ಮಾಡಿ :https://youtu.be/IKW_z7twgxc

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 220

You cannot copy content of this page