ನವದೆಹಲಿ: Tulu Times l ಭಾರತದಲ್ಲಿ ಕಾಗದದ ಕರೆನ್ಸಿ ನೋಟುಗಳ ಬದಲಿಗೆ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪರಿಚಯಿಸುವ ಕುರಿತು ಸಂಜಯ್ ಮಲ್ಹೋತ್ರಾ ನೇತೃತ್ವದ ಆರ್ ಬಿಐ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈ ಕುರಿತು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಕಾಗದದ ನೋಟುಗಳ ಮುದ್ರಣ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವುದು ಹಾಗೂ ಕರೆನ್ಸಿ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಲಿಮರ್ ನೋಟುಗಳ ಯೋಜನೆ ಮತ್ತೆ ಚರ್ಚೆಗೆ ಬಂದಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಕರೆನ್ಸಿ ಮುದ್ರಣ ವೆಚ್ಚ ₹6,372 ಕೋಟಿ ತಲುಪಿತ್ತು. 2026ರಲ್ಲಿ ಅದು ₹4,875 ಕೋಟಿಗೆ ಇಳಿದಿದ್ದರೂ, ವೆಚ್ಚ ಇನ್ನೂ ಹೆಚ್ಚಿನ ಮಟ್ಟದಲ್ಲಿದೆ. 2017ರ ನೋಟು ಅಮಾನ್ಯೀಕರಣದ ನಂತರ ಹೊಸ ನೋಟುಗಳ ಮುದ್ರಣ ವೇಳೆ ಈ ವೆಚ್ಚ ₹7,965 ಕೋಟಿ ಎಂಬ ದಾಖಲೆ ಮಟ್ಟ ತಲುಪಿತ್ತು.

ಪಾಲಿಮರ್ ನೋಟುಗಳು ವಿಶೇಷ ರೀತಿಯ ಪ್ಲಾಸ್ಟಿಕ್ ವಸ್ತುವಿನಿಂದ ತಯಾರಾಗುವ ಕರೆನ್ಸಿ ನೋಟುಗಳಾಗಿವೆ. ಇವು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುವುದಲ್ಲದೆ, ನೀರು, ಧೂಳು ಹಾಗೂ ಹರಿದುಹೋಗುವ ಸಮಸ್ಯೆಗಳಿಗೆ ಹೆಚ್ಚು ಪ್ರತಿರೋಧ ಹೊಂದಿರುತ್ತವೆ.
ಪ್ಲಾಸ್ಟಿಕ್ ನೋಟುಗಳ ಪ್ರಯೋಜನಗಳು ;
* ಹೆಚ್ಚು ಬಾಳಿಕೆ
* ನಕಲಿ ನೋಟು ತಯಾರಿಕೆ ಕಷ್ಟ
* ನೀರಿನಿಂದ ಹಾನಿಯಾಗುವುದಿಲ್ಲ
* ಸ್ವಚ್ಛತೆ ಕಾಪಾಡಲು ಸುಲಭ
* ದೀರ್ಘಾವಧಿಯಲ್ಲಿ ಮುದ್ರಣ ವೆಚ್ಚ ಕಡಿಮೆಯಾಗುವ ಸಾಧ್ಯತೆ
2014ರಲ್ಲೇ ಪ್ರಯೋಗಕ್ಕೆ ಯೋಜನೆ;
2014ರಲ್ಲಿ ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದ್ದು, ₹10 ಮುಖಬೆಲೆಯ 100 ಕೋಟಿ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಯೋಜನೆ ರೂಪಿಸಲಾಗಿತ್ತು. ಈ ಪ್ರಯೋಗಕ್ಕಾಗಿ ಆಯ್ಕೆ ಮಾಡಲಾದ ನಗರಗಳು: ಕೊಚ್ಚಿ, ಮೈಸೂರು, ಜೈಪುರ, ಶಿಮ್ಲಾ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಆ ಯೋಜನೆ ಮುಂದುವರಿಯಲಿಲ್ಲ. ಪ್ರಸ್ತುತ ವಿಶ್ವದ 60ಕ್ಕೂ ಹೆಚ್ಚು ದೇಶಗಳು ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಸುತ್ತಿವೆ. ಅದರಲ್ಲಿ ಪ್ರಮುಖ ದೇಶಗಳು: ಆಸ್ಟ್ರೇಲಿಯಾ, ಕೆನಡಾ, ಯು.ಕೆ, ನ್ಯೂಜಿಲ್ಯಾಂಡ್, ವಿಯೆಟ್ನಾಂ, ರೊಮಾನಿಯಾ, ಬ್ರೌನಿ ಇತ್ಯಾದಿ…
ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದರೆ:
* ನೋಟುಗಳ ಆಯುಷ್ಯ ಹೆಚ್ಚಾಗಲಿದೆ.
* ಮರುಮುದ್ರಣ ವೆಚ್ಚ ಕಡಿಮೆಯಾಗಬಹುದು.
* ನಕಲಿ ನೋಟುಗಳ ವಿರುದ್ಧ ಹೋರಾಟಕ್ಕೆ ಸಹಾಯವಾಗಬಹುದು.
* ಬ್ಯಾಂಕ್‌ಗಳು ಮತ್ತು ಆರ್‌ಬಿಐಗೆ ದೀರ್ಘಾವಧಿಯಲ್ಲಿ ಉಳಿತಾಯವಾಗುವ ಸಾಧ್ಯತೆ ಇದೆ. ಆದರೆ, ಹೊಸ ಮುದ್ರಣ ತಂತ್ರಜ್ಞಾನ, ಯಂತ್ರೋಪಕರಣಗಳ ಬದಲಾವಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಕೆಲ ಸವಾಲುಗಳೂ ಎದುರಾಗಬಹುದು. ಭಾರತದಲ್ಲಿ ಪಾಲಿಮರ್ ಕರೆನ್ಸಿ ಪರಿಚಯ ಇನ್ನೂ ಪ್ರಾಥಮಿಕ ಹಂತದಲ್ಲಿದ್ದರೂ, ಕರೆನ್ಸಿ ನಿರ್ವಹಣೆಯನ್ನು ಹೆಚ್ಚು ಸುರಕ್ಷಿತ, ಬಾಳಿಕೆಬಾಳುವ ಮತ್ತು ವೆಚ್ಚ-ಪರಿಣಾಮಕಾರಿಯಾಗಿ ಮಾಡಲು ಆರ್‌ಬಿಐ ಮಹತ್ವದ ಹೆಜ್ಜೆ ಇಡುವ ಸಾಧ್ಯತೆ ಇದೆ. ಮುಂದಿನ ತಿಂಗಳುಗಳಲ್ಲಿ ಈ ಕುರಿತು ಅಧಿಕೃತ ನಿರ್ಧಾರ ಹೊರಬರುವ ನಿರೀಕ್ಷೆಯಿದೆ.
RBI considering introducing plastic notes in India – ತುಳು ಟೈಮ್ಸ್
ಇದನ್ನೂ ಓದಿ : ತಂತ್ರಜ್ಞಾನ : ಕಪ್ಪು ಚಿನ್ನವೆಂದೇ ಪ್ರಸಿದ್ಧಿಯಲ್ಲಿರುವ ಕಲ್ಲಿದ್ದಲ್ಲಿಗೆ ಹೊಸ ಜೀವ ತುಂಬುವ ಕೆಲಸ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://www.youtube.com/live/xI868u7lWtY?si=jDB8wzyX_BTDnllb











