ಸುಳ್ಯ: Tulu Times l ಮಕ್ಕಳ ಸರ್ವತೋಮುಖ ಬೆಳವಣಿಗೆ, ಪ್ರತಿಭಾ ಅನಾವರಣ, ಶಿಕ್ಷಣ, ಆರೋಗ್ಯ, ಸಾಹಿತ್ಯ, ಕಲೆ ಮತ್ತು ಪರಿಸರ ಜಾಗೃತಿಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸುಳ್ಯದಲ್ಲಿ ಪ್ರಪ್ರಥಮ ಬಾರಿಗೆ ‘ಸಂಕಲ್ಪ ಮಕ್ಕಳ ಹಬ್ಬ 2026 – ವಿಕಸಿತ ಭಾರತದ ಕಡೆ ಮಕ್ಕಳ ನಡೆ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು 2026ರ ಸೆಪ್ಟೆಂಬರ್ 9, 10 ಮತ್ತು 11ರಂದು ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನ, ಅಮರಶ್ರೀಭಾಗ್, ಸುಳ್ಯದಲ್ಲಿ ನಡೆಯಲಿದೆ.

ಮಕ್ಕಳ ಆರೋಗ್ಯಕರ ಆಹಾರ ಮೇಳ, ಪುಸ್ತಕ ಮೇಳ, ಶೈಕ್ಷಣಿಕ ಮಾಹಿತಿ ಮತ್ತು ಪ್ರದರ್ಶನ, ಶೈಕ್ಷಣಿಕ ಹಾಗೂ ಸೃಜನಾತ್ಮಕ ವಸ್ತುಗಳ ಮಾರಾಟ ಮಳಿಗೆ, ಹೂವು-ಹಣ್ಣಿನ ಗಿಡಗಳ ಮಾರಾಟ ಮತ್ತು ‘ಮನೆಗೊಂದು ಗಿಡ’ ಪರಿಸರ ಜಾಗೃತಿ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಗಳಾಗಿವೆ. ಮಾತೃಭಾಷಾ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ತುಳು ಮತ್ತು ಅರೆಭಾಷೆ ಸಾಹಿತ್ಯ ಸ್ಪರ್ಧೆಗಳು, ಮಕ್ಕಳ ಚರ್ಚಾ ಗೋಷ್ಠಿಗಳು ಹಾಗೂ ವಿವಿಧ ಸೆಮಿನಾರ್‌ಗಳನ್ನು ಆಯೋಜಿಸಲಾಗುತ್ತಿದೆ.
ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ತಪಾಸಣಾ ಶಿಬಿರವೂ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮಾರ್ಗದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತದೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳು, ಮಕ್ಕಳ ಪ್ರತಿಭಾ ಪ್ರದರ್ಶನ, ಸಾಂಸ್ಕೃತಿಕ ಸಂಜೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳೂ ಇರಲಿವೆ.

ವಿಶೇಷ ಆಕರ್ಷಣೆಯಾಗಿ ಪಾರಂಪರಿಕ ವಸ್ತುಗಳು ಮತ್ತು ನಾಣ್ಯ ಪ್ರದರ್ಶನ, ಚಿತ್ರ ಪ್ರದರ್ಶನ, ಮಕ್ಕಳ ತಾರಾಲಯ, ಎಐ ರೋಬೋಟ್ ಪ್ರದರ್ಶನ ಹಾಗೂ ಸ್ಥಳದಲ್ಲೇ ತಯಾರಿಸುವ ಮಾವು, ಹಲಸು ಮತ್ತು ಅನಾನಸು ಹಣ್ಣಿನ ಹೋಳಿಗೆ ಗಮನ ಸೆಳೆಯಲಿದೆ. ಪೋಷಕರಿಗಾಗಿ ‘ಮಾತೃ ಸಂಗಮ’ ಎಂಬ ವಿನೂತನ ಮಾಹಿತಿ ಕಾರ್ಯಾಗಾರ, ಬ್ಯಾಂಕಿಂಗ್ ಸೇವಾ ಮಾಹಿತಿ, ಬಹುಮಾನ, ಪ್ರಮಾಣಪತ್ರ ಹಾಗೂ ಮಾಹಿತಿ-ಮನೋರಂಜನಾ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಸಹಕಾರದೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಒಂದೇ ವೇದಿಕೆಯಲ್ಲಿ ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಸಮಾಗಮಕ್ಕೆ ಅವಕಾಶ ಕಲ್ಪಿಸುವ ಈ ಕಾರ್ಯಕ್ರಮವು ಮನಮನಕ್ಕೆ, ಮನೆಮನೆಗೆ, ಶಾಲೆಶಾಲೆಗೆ”
ಎಂಬ ಆಶಯದೊಂದಿಗೆ ಮಕ್ಕಳಲ್ಲಿ ಜ್ಞಾನ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಪ್ರಯತ್ನವಾಗಿದೆ. ಕಾರ್ಯಕ್ರಮದ ಇನ್ನಷ್ಟು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
‘Sankalpa Children’s Festival’ 2026 for children in Sullia – a first-of-its-kind event – ತುಳುಟೈಮ್ಸ್
ಇದನ್ನೂ ಓದಿ :ಸುಳ್ಯ : ದೇಶಭಕ್ತಿ ಗೀತಗಾಯನ ಸ್ಪರ್ಧೆ ಉದ್ಘಾಟನೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/aaO7S8GGYgs











