ಕರ್ನಾಟಕ : Tulu Times l ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ;
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 26ರಿಂದ 28ರವರೆಗೆ ಕೆಲವೆಡೆ ಭಾರೀ ಮಳೆಯಾಗಲಿದೆ. ಅಲ್ಲದೆ ಜೂನ್ 29ರಿಂದ ಜುಲೈ 1ರವರೆಗೆ ಈ ಮೂರು ಜಿಲ್ಲೆಗಳಲ್ಲೂ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.

ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಜೂನ್ 29 ಮತ್ತು 30ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಲಿದೆ. ಜುಲೈ 1ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ 29ರಿಂದ ಜುಲೈ 1ರವರೆಗೆ ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂನ್ 30ರಂದು ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಂಟೆಗೆ 30–40 ಕಿ.ಮೀ. ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗಲಿದೆ. ಸದ್ಯ ಗುಡುಗು-ಮಿಂಚು ಅಥವಾ ಆಲಿಕಲ್ಲು ಮಳೆಯ ಬಗ್ಗೆ ಯಾವುದೇ ವಿಶೇಷ ಎಚ್ಚರಿಕೆ ನೀಡಲಾಗಿಲ್ಲ. ಮುಂದಿನ ಐದು ದಿನಗಳಲ್ಲಿ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಆಗುವ ಸಾಧ್ಯತೆಯೂ ಇಲ್ಲ ಎಂದು ಐಎಂಡಿ ತಿಳಿಸಿದೆ. ಬೆಂಗಳೂರು ನಗರದಲ್ಲಿ ಮುಂದಿನ 24ರಿಂದ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30–40 ಕಿ.ಮೀ. ವೇಗದ ಗಾಳಿ ಬೀಸುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಇರಲಿದೆ.
Heavy rains expected in Karnataka for 7 days; Heavy warning issued for these districts – ತುಳು ಟೈಮ್ಸ್
ಇದನ್ನೂ ಓದಿ : ಭಾಷಾ ನೀತಿ ಗೊಂದಲಕ್ಕೆ ತೆರೆ; ಕೇಂದ್ರದಿಂದ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://youtube.com/shorts/OMCY194x_LY?feature=share











